ಮುಜಾಫರ್ನಗರ(ಉತ್ತರಪ್ರದೇಶ) :ಸೆಪ್ಟೆಂಬರ್ 27ಕ್ಕೆ ಭಾರತ್ ಬಂದ್ ನಡೆಸುವುದಾಗಿ ಎಲ್ಲಾ ರೈತ ಸಂಘಟನೆಗಳು ಕರೆ ನೀಡಿವೆ. ಮುಜಾಫರ್ನಗರದಲ್ಲಿ ನಡೆದ ಕಿಸಾನ್ ಮಹಾಪಂಚಾಯತ್ ವೇಳೆ ಭಾರತ್ ಬಂದ್ಗೆ ಸರ್ವಾನುಮತದ ಒಪ್ಪಿಗೆ ನೀಡಲಾಗಿದೆ.
ಕೇಂದ್ರ ಸರ್ಕಾರ ಬೆರಳೆಣಿಕೆಯಷ್ಟು ರೈತರು ಮಾತ್ರ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಹೇಳುತ್ತಿದೆ. ಎಷ್ಟು ಮಂದಿ ಪ್ರತಿಭಟನಾಕಾರರಿದ್ದಾರೆ ಎಂದು ಇವತ್ತಿನ ಕಿಸಾನ್ ಮಹಾಪಂಚಾಯತ್ಗೆ ಕೇಂದ್ರ ಸರ್ಕಾರ ಬಂದು ನೋಡಲಿ. ಇಲ್ಲಿನ ಘೋಷಣೆಗಳು ಸಂಸತ್ನಲ್ಲಿ ಕುಳಿತವರ ಕಿವಿಗೆ ತಲುಪಬೇಕು ಎಂದು ರೈತ ಮುಖಂಡರು ಹೇಳಿದ್ದಾರೆ.
ಈಗ ನಡೆಸುತ್ತಿರುವ ರೈತ ಆಂದೋಲನಕ್ಕೆ 'ಎಲ್ಲಾ ಜಾತಿ, ಧರ್ಮ, ರಾಜ್ಯ, ವರ್ಗ, ಸಣ್ಣ ವ್ಯಾಪಾರಿಗಳು ಮತ್ತು ಸಮಾಜದ ಎಲ್ಲ ವರ್ಗಗಳ ಬೆಂಬಲವಿದೆ' ಎಂದು ಈಗ ನಡೆಯುತ್ತಿರುವ ಮಹಾಪಂಚಾಯತ್ ಸಾಬೀತುಪಡಿಸುತ್ತದೆ ಎಂದು ರೈತ ಮುಖಂಡರು ಭರವಸೆ ವ್ಯಕ್ತಪಡಿಸಿದ್ದಾರೆ.
ಮೋದಿ ಮತ್ತು ಯೋಗಿ ಸರ್ಕಾರಗಳು ರೈತರು, ಕೃಷಿ ಕಾರ್ಮಿಕರು ಮತ್ತು ಕೃಷಿ ಚಳವಳಿಯ ಬೆಂಬಲಿಗರ ಶಕ್ತಿಯನ್ನು ಅರಿತುಕೊಳ್ಳುವಂತೆ ಈ ಮಹಾಪಂಚಾಯತ್ ಮಾಡುತ್ತದೆ. ಕಳೆದ 9 ತಿಂಗಳಲ್ಲಿ ಈಗ ನಡೆಯುತ್ತಿರುವ ಮುಜಾಫರ್ನಗರ ಕಿಸಾನ್ ಮಹಾಪಂಚಾಯತ್ ಅತಿ ದೊಡ್ಡ ಮಹಾಪಂಚಾಯತ್ ಆಗಿದೆ ಎಂದು ಭಾರತ್ ಕಿಸಾನ್ ಯೂನಿಯನ್ ಹೇಳಿದೆ.
ಸರ್ಕಾರಗಳು ರೈತರ ಬೇಡಿಕೆಗಳನ್ನು ಒಪ್ಪಿಕೊಳ್ಳದಿದ್ದರೆ 2022ರಲ್ಲಿ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ವಿಧಾನಸಭಾ ಚುನಾವಣೆಗಳಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ಪ್ರಚಾರ ಮಾಡುವುದಾಗಿ ರೈತ ನಾಯಕರು ಸ್ಪಷ್ಟಪಡಿಸಿದರು. ಜೊತೆಗೆ 2024ರ ಲೋಕಸಭೆ ಚುನಾವಣೆ ಬರುವವರೆಗೂ ತಮ್ಮ ಆಂದೋಲನವನ್ನು ಮುಂದುವರಿಸುವುದಾಗಿ ಹೇಳಿದರು.
ಮಹಾಪಂಚಾಯತ್ ರೈತರ ಶಕ್ತಿ ಮತ್ತು ಸರ್ಕಾರಗಳು ನಮ್ಮ ಹಕ್ಕುಗಳನ್ನು ಎಲ್ಲಿಯವರೆಗೆ ನಿರಾಕರಿಸುತ್ತವೆಯೋ, ಅಲ್ಲಿಯವರೆಗೆ ಪ್ರತಿಭಟನೆ ಮುಂದುವರೆಯುತ್ತದೆ. ರೈತರು ಹಲವಾರು ರಾಜ್ಯಗಳಿಂದ ಬಂದಿದ್ದಾರೆ ಮತ್ತು ಅವರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ ಎಂದು ಬಿಕೆಯು ವಕ್ತಾರ ರಾಕೇಶ್ ಟಿಕಾಯತ್ ಹೇಳಿದರು.
ಭಾರತವನ್ನು ಈಗ ಮಾರಾಟಕ್ಕೆ ಇಡಲಾಗುತ್ತಿದೆ ಮತ್ತು ರಾಷ್ಟ್ರೀಯ ಆಸ್ತಿಗಳನ್ನು ಖಾಸಗಿ ವಲಯಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಟಿಕಾಯತ್ ಆರೋಪಿಸಿದರು. ಕಬ್ಬು ಬೆಳೆಯುವ ರೈತರಿಗೆ ಬೆಂಬಲವಾಗಿ ಮುಂದಿನ ಮಹಾಪಂಚಾಯತ್ ಸಭೆ ಲಖನೌ ನಗರದಲ್ಲಿ ನಡೆಯಲಿದೆ ಸ್ಪಷ್ಟನೆ ನೀಡಿದರು.