ಜಗತ್ತಿನಾದ್ಯಂತ ಇಂದು ವಿಶ್ವ ನಿದ್ರಾ ದಿನವನ್ನು ಆಚರಿಸಲಾಗುತ್ತದೆ. ಮನುಷ್ಯರಿಗೆ ನೀರು, ಆಹಾರ ಮತ್ತು ಗಾಳಿಯಂತೆ ನಿದ್ರೆಯೂ ಬಹಳ ಮುಖ್ಯ. ನಿದ್ದೆ ನಮ್ಮ ದೇಹ ಮತ್ತು ಮನಸ್ಸನ್ನು ಪುನಃಶ್ಚೇತನಗೊಳಿಸುತ್ತದೆ. ನಿಗದಿತ ಸಮಯದ ನಿದ್ದೆ ವ್ಯಕ್ತಿ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಇಂದಿನ ದಿನವನ್ನು ವಿಶೇಷವಾಗಿ ಆಚರಿಸಲು ಬೆಂಗಳೂರು ಮೂಲದ ಕಂಪನಿಯೊಂದು ತನ್ನ ಉದ್ಯೋಗಿಗಳ ಯೋಗಕ್ಷೇಮಕ್ಕಾಗಿ ಅಂತಾರಾಷ್ಟ್ರೀಯ ನಿದ್ರಾ ದಿನಾಚರಣೆಯಂದು ಐಚ್ಛಿಕ ರಜೆ ಘೋಷಿಸಿದೆ.
Wakefit Solutions, a D2C home-and-sleep solutions ಎಂಬ ಕಂಪನಿಯು ತನ್ನ ಗೃಹೋಪಯೋಗಿ ಉತ್ಪನ್ನಗಳಿಂದ ಜನಪ್ರಿಯವಾಗಿದೆ. ಇಂದು ಅಂತಾರಾಷ್ಟ್ರೀಯ ನಿದ್ರಾ ದಿನದ ಅಂಗವಾಗಿ ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದೆ. ಆ ಪೋಸ್ಟ್ ಎಲ್ಲಾ ಉದ್ಯೋಗಿಗಳಿಗೆ ಕಳುಹಿಸಲಾದ ಇ-ಮೇಲ್‌ನ ಸ್ಕ್ರೀನ್‌ಶಾಟ್ ಆಗಿದೆ. ಇದರಲ್ಲಿ "ಸರ್ಪ್ರೈಸ್ ಹಾಲಿಡೇ: ಅನೌನ್ಸಿಂಗ್ ದಿ ಗಿಫ್ಟ್ ಆಫ್ ಸ್ಲೀಪ್" ಎಂದು ಶೀರ್ಷಿಕೆ ನೀಡಲಾಗಿದೆ. "ವಿಶ್ವ ನಿದ್ರಾ ದಿನದ ಅಂಗವಾಗಿ ಎಲ್ಲಾ ವೇಕ್‌ಫಿಟ್ ಉದ್ಯೋಗಿಗಳಿಗೆ ಮಾರ್ಚ್ 17, 2023 ರಂದು ವಿಶ್ರಾಂತಿ ಪಡೆಯಲು ರಜೆ ನೀಡಲಾಗಿದೆ. ಉದ್ಯೋಗಿಗಳು ವಿಶ್ರಾಂತಿ ಪಡೆಯಲು ಇದು ಉತ್ತಮ ಅವಕಾಶವಾಗಿದೆ." ಎಂದು ತಿಳಿಸಿದೆ.
"ನಮ್ಮ ಗ್ರೇಟ್ ಇಂಡಿಯನ್ ಸ್ಲೀಪ್ ಸ್ಕೋರ್‌ಕಾರ್ಡ್‌ನ 6 ನೇ ಆವೃತ್ತಿಯು ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಕೆಲಸದ ಸಮಯದಲ್ಲಿ ನಿದ್ರೆಗೆ ಜಾರುವವರ ಪ್ರಮಾಣ 2022 ರಿಂದ ಶೇಕಡಾ 21 ಹೆಚ್ಚಳವಾಗಿದೆ ಮತ್ತು ಪ್ರತಿದಿನ ಬೆಳಗ್ಗೆ ಸುಸ್ತಾಗಿ ಏಳುವ ಜನರ ಪ್ರಮಾಣ 11% ಹೆಚ್ಚಳವಾಗಿದೆ ಎಂದು ಬಹಿರಂಗಪಡಿಸಿದೆ. ನಿದ್ರಾಹೀನತೆಯ ವ್ಯಾಪಕತೆಯನ್ನು ಪರಿಗಣಿಸಿ, ನಿದ್ರಾ ದಿನವನ್ನು ಆಚರಿಸಲು ನಮ್ಮ ಕಂಪನಿಯು ಉದ್ಯೋಗಿಗಳಿಗೆ ಈ ಉಡುಗೊರೆ ನೀಡಿದೆ. ನಾವು ಸ್ಲೀಪ್ ಡೇ ಅನ್ನು ಹಬ್ಬವೆಂದು ಪರಿಗಣಿಸುತ್ತೇವೆ, ನೀವು ಈ ರಜೆಯನ್ನು HR ಪೋರ್ಟಲ್ ಮೂಲಕ ಪಡೆಯಬಹುದು" ಎಂದು ಪತ್ರದಲ್ಲಿ ಉಲ್ಲೇಖಿಸಿದೆ.
ಇದನ್ನೂ ಓದಿ:9 ಗಂಟೆ ನಿದ್ರೆ ಮಾಡಿ 1 ಲಕ್ಷ ರೂ. ಪಡೆಯಿರಿ... ಬಟ್ ಕಂಡಿಷನ್ ಅಪ್ಲೈ..!