ಬಠಿಂಡಾ(ಪಂಜಾಬ್):ಇಲ್ಲಿನ ಸೇನಾ ನೆಲೆಯಲ್ಲಿ ನಿನ್ನೆ ಗುಂಡಿನ ಸದ್ದು ಮಾರ್ದನಿಸಿತ್ತು. ಚಕಮಕಿಯಲ್ಲಿ ನಾಲ್ವರು ಯೋಧರು ಸಾವನ್ನಪ್ಪಿದ್ದರು. ಇದಾದ ಬಳಿಕ ಸಂಜೆ ವೇಳೆ ಮತ್ತೊಬ್ಬ ಯೋಧ ತಲೆಗೆ ಗುಂಡು ಹಾರಿಸಿಕೊಂಡಿದ್ದ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದಾನೆ. ಇದರಿಂದ ಸೇನಾ ನೆಲೆಯಲ್ಲಿ ಸಾವನ್ನಪ್ಪಿದ ಯೋಧರ ಸಂಖ್ಯೆ 5 ಕ್ಕೇರಿದೆ. ಸೇನಾ ನೆಲೆಯ ಸುತ್ತ ಘೋಷಿಸಲಾಗಿದ್ದ ರೆಡ್ ಅಲರ್ಟ್ ಮುಂದುವರಿದಿದೆ.
ಪಂಜಾಬ್ನ ಬಠಿಂಡಾದಲ್ಲಿರುವ ಸೇನಾ ನೆಲೆಯ ಮೇಲೆ ಇಬ್ಬರು ಮುಸುಕುಧಾರಿಗಳು ಬುಧವಾರ ಬೆಳಗ್ಗೆ ಗುಂಡಿನ ಸುರಿಮಳೆ ಗೈದಿದ್ದರು. ಇದರಿಂದ ನಾಲ್ವರು ಯೋಧರು ಪ್ರಾಣ ಕಳೆದುಕೊಂಡಿದ್ದರು. ಮೃತರು ಕರ್ನಾಟಕ ಮತ್ತು ತಮಿಳುನಾಡಿಗೆ ಸೇರಿದವರಾಗಿದ್ದರು.
ಈ ಮಾರಣಾಂತಿಕ ಗುಂಡಿನ ದಾಳಿ ಭಯೋತ್ಪಾದನೆ ದಾಳಿಯಾಗಿರಲಿಕ್ಕಿಲ್ಲ ಎಂದು ಹೇಳಲಾಗಿದೆ. ದಾಳಿಗೂ ಮೊದಲು ಗಾರ್ಡ್ ರೂಮ್‌ನಿಂದ ಇನ್ಸಾಸ್ ರೈಫಲ್ ಮತ್ತು ಗುಂಡುಗಳನ್ನು ಕಳವು ಮಾಡಲಾಗಿದೆ. ಇದರಿಂದ ಯೋಧರ ಮಧ್ಯೆಯೇ ಚಕಮಕಿ ನಡೆದಿರಬಹುದು ಎಂದು ಶಂಕಿಸಲಾಗಿದೆ. ನಾಪತ್ತೆಯಾಗಿರುವ INSAS ರೈಫಲ್ ಸುಳಿವಿನ ಮೇಲೆ ತನಿಖೆ ನಡೆಸಲಾಗುತ್ತಿದೆ ಎಂದು ಭಾರತೀಯ ಸೇನೆ ತಿಳಿಸಿದೆ.
ರೆಡ್ ಅಲರ್ಟ್ ಘೋಷಣೆ ಮುಂದುವರಿಕೆ:ಗುಂಡಿನ ದಾಳಿ ನಡೆಸಿ ಸೇನಾ ಸಿಬ್ಬಂದಿ ಸಾವಿಗೆ ಕಾರಣವಾದ ಘಟನೆಯ ಬಳಿಕ ನೆಲೆಯ ಸುತ್ತಲೂ ಬಿಗಿ ಬಂದೋಬಸ್ತ್ ಹಾಕಲಾಗಿದೆ. ಸೇನಾ ಪ್ರದೇಶದಲ್ಲಿ ರೆಡ್ ಅಲರ್ಟ್ ಮುಂದುವರಿದಿದೆ. ಸೇನಾ ನೆಲಯಲ್ಲಿನ ಶಾಲೆಯನ್ನು ಮುಚ್ಚಲಾಗಿದ್ದು, ಮಕ್ಕಳನ್ನು ಕಳುಹಿಸದಂತೆ ಪೋಷಕರಿಗೆ ಸೂಚನೆ ನೀಡಲಾಗಿದೆ. ಘಟನೆಯ ಬಗ್ಗೆ ಪೊಲೀಸರು ಮತ್ತು ಸೇನಾ ತಂಡಗಳು ಜಂಟಿಯಾಗಿ ತನಿಖೆ ನಡೆಸುತ್ತಿವೆ.
ಇನ್ಸಾಸ್ ರೈಫಲ್ನಿಂದ ಗುಂಡು ಹಾರಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಪೊಲೀಸರು ಸ್ಥಳದಿಂದ 19 ಖಾಲಿ ಸೆಲ್ಗಳನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ನಡೆಸಿದ ಇಬ್ಬರು ಶೂಟರ್‌ಗಳು ಬಿಳಿ ಕುರ್ತಾ, ಪೈಜಾಮ ಧರಿಸಿ ಬಂದಿದ್ದರು. ಮುಖವಾಡ ಹಾಕಿಕೊಂಡಿದ್ದರು. ಇದು ಭಯೋತ್ಪಾದಕ ದಾಳಿಯೂ ಆಗಿರುವ ಸಾಧ್ಯತೆ ಇದ್ದು, ಈ ಕೋನದಲ್ಲೂ ತನಿಖೆ ನಡೆಸಲಾಗುತ್ತಿದೆ. ದಾಳಿಗೂ ಎರಡು ದಿನಗಳ ಮೊದಲು, ಸೇನಾ ನೆಲೆಯ ಗಾರ್ಡ್ ರೂಮ್‌ನಿಂದ ಇನ್ಸಾಸ್ ರೈಫಲ್ ಮತ್ತು ಬುಲೆಟ್‌ಗಳು ನಾಪತ್ತೆಯಾಗಿದ್ದವು. ದಾಳಿಯಲ್ಲಿ ಇದೇ ರೈಫಲ್ ಬಳಸಲಾಗಿದೆ ಎಂದು ಪೊಲೀಸರು ಮತ್ತು ಸೇನೆ ಶಂಕಿಸಿದೆ.
ವಿಧಿವಿಜ್ಞಾನ ಪರೀಕ್ಷೆಗೆ ರೈಫಲ್ ರವಾನೆ:ತನಿಖಾ ತಂಡಕ್ಕೆ ಇನ್ಸಾಸ್ ರೈಫಲ್ ಮತ್ತು ಕೆಲ ಗುಂಡುಗಳು ಸಿಕ್ಕಿವೆ. ಪೊಲೀಸ್ ಮತ್ತು ಸೇನೆಯ ಜಂಟಿ ತಂಡ ಸಿಕ್ಕ ರೈಫಲ್ ಅನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ದಾಳಿಯಲ್ಲಿ ಇದೇ ರೈಫಲ್ ಬಳಸಲಾಗಿದೆಯೇ ಎಂಬುದು ಬಳಿಕ ಸ್ಪಷ್ಟವಾಗಲಿದೆ. ಯಾವುದೇ ಶಂಕಿತರನ್ನು ಬಂಧಿಸಲಾಗಿಲ್ಲ ಎಂದು ಸೇನೆ ಹೇಳಿದೆ. ಕಂಟೋನ್ಮೆಂಟ್ ಒಳಗೆ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.
ದಾಳಿ ಬಳಿಕ ಸೇನಾ ನೆಲೆಯನ್ನು ಸೀಜ್ ಮಾಡಲಾಗಿದೆ. ಇತ್ತ ಕಡೆ ಜನರ ಓಡಾಟವನ್ನೂ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಒಳಗಿರುವ ಸೈನಿಕರ ಕುಟುಂಬಗಳನ್ನು ಮನೆಯಲ್ಲಿಯೇ ಇರುವಂತೆ ಸೂಚಿಸಲಾಗಿದೆ. ಇಲ್ಲಿನ ಶಾಲೆಗಳನ್ನೂ ಬಂದ್ ಮಾಡಲಾಗಿದೆ.
ಮೃತ ಯೋಧ ಕರ್ನಾಟಕ ಮತ್ತು ತಮಿಳು ಮೂಲ:ದಾಳಿಯಲ್ಲಿ ಕರ್ನಾಟಕದ ಬಾಗಲಕೋಟೆಯ ಜಿಲ್ಲೆಯ ಸಂತೋಷ ನಾಗರಾಳ ಮತ್ತು ರಾಜ್ಯದ ಸಾಗರ್ ಬನ್ನೆ, ತಮಿಳುನಾಡಿನ ಕಮಲೇಶ್ ಆರ್, ಯೋಗೀಶ್ ಕುಮಾರ್ ಪ್ರಾಣ ಕಳೆದುಕೊಂಡಿದ್ದಾರೆ.
ಓದಿ:ಬಟಿಂಡಾ ಮಿಲಿಟರಿ ಠಾಣೆಯಲ್ಲಿ ಘರ್ಷಣೆ: ಕರ್ನಾಟಕದ ಇಬ್ಬರು ಸೇರಿ ನಾಲ್ವರು ಯೋಧರು ಹುತಾತ್ಮ