ನವದೆಹಲಿ: ಸಮಾಲೋಚನೆಯ ನಂತರ ಕ್ರಿಪ್ಟೋಕರೆನ್ಸಿಗಳನ್ನು ಭಾರತದಲ್ಲಿ ನಿಷೇಧಿಸಬೇಕೋ ಅಥವಾ ನಿಷೇಧಿಸಬಾರದೋ ಎಂಬುದರ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಇಂದು ಮಾತನಾಡಿದ ಅವರು, ಕ್ರಿಪ್ಟೋಕರೆನ್ಸಿಗಳ ಲಾಭದ ಮೇಲೆ ಶೇಕಡಾ 30ರಷ್ಟು ತೆರಿಗೆಯನ್ನು ವಿಧಿಸುವ ಸರ್ಕಾರದ ಕ್ರಮವು ಮಾರುಕಟ್ಟೆಯಲ್ಲಿ ಖಾಸಗಿ ಡಿಜಿಟಲ್ ಕರೆನ್ಸಿಗಳ ಕಾನೂನುಬದ್ಧತೆ ಜೊತೆಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಕ್ರಿಪ್ಟೋಕರೆನ್ಸಿಗಳನ್ನು ಕಾನೂನುಬದ್ಧಗೊಳಿಸಲು ಅಥವಾ ನಿಷೇಧಿಸಲು ಸಂಬಂಧಿಸಿದಂತೆ ನಾವು ಏನನ್ನೂ ಮಾಡುತ್ತಿಲ್ಲ. ಹೀಗಾಗಿ ಸಮಾಲೋಚನೆಯ ನಂತರ ಕ್ರಿಪ್ಟೋಕರೆನ್ಸಿ ನಿಷೇಧಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಫೆಬ್ರವರಿ 1 ರಂದು ಸಂಸತ್ತಿನಲ್ಲಿ ಮಂಡಿಸಿದ 2022-23ರ ಕೇಂದ್ರ ಬಜೆಟ್‌ನಲ್ಲಿ, ಹೂಡಿಕೆದಾರರಿಂದ ಕ್ರಿಪ್ಟೋಕರೆನ್ಸಿ ವಹಿವಾಟಿನ ಲಾಭದ ಮೇಲೆ ಶೇಕಡಾ 30ರಷ್ಟು ತೆರಿಗೆಯನ್ನು ವಿಧಿಸಲು ಸರ್ಕಾರ ಪ್ರಸ್ತಾಪಿಸಿತ್ತು. ಕ್ರಿಪ್ಟೋಕರೆನ್ಸಿ ಉದ್ಯಮಿಗಳು ಸರ್ಕಾರದ ಈ ನಿಯಮವನ್ನು ಸ್ವಾಗತಿಸಿ, ಇದು ನಮ್ಮ ವಹಿವಾಟುಗಳನ್ನು ಕಾನೂನುಬದ್ಧಗೊಳಿಸುತ್ತದೆ ಎಂದು ಉದ್ಯಮಿಗಳು ಅಭಿಪ್ರಾಯಪಟ್ಟಿದ್ದರು.
ಇದನ್ನೂ ಓದಿ: ನೂರನೇ ವರ್ಷದ ಗುರಿ ಇಟ್ಟುಕೊಂಡು ಬಜೆಟ್ ಮಂಡನೆ: ನಿರ್ಮಲಾ ಸೀತಾರಾಮನ್ ಸಮರ್ಥನೆ
ಇತ್ತ ವಿತ್ತೀಯ ನೀತಿಯನ್ನು ಪ್ರಕಟಿಸಿದ ಭಾರತೀಯ ರಿಸರ್ವ್ ಬ್ಯಾಂಕ್ (RBI) ಗವರ್ನರ್ ಶಕ್ತಿಕಾಂತ ದಾಸ್ ಅವರು ಖಾಸಗಿ ಕ್ರಿಪ್ಟೋಕರೆನ್ಸಿಗಳು ಸ್ಥೂಲ ಆರ್ಥಿಕ ಮತ್ತು ಆರ್ಥಿಕ ಸ್ಥಿರತೆಗೆ ಅಪಾಯವನ್ನುಂಟುಮಾಡುತ್ತವೆ ಮತ್ತು ಈ ಎರಡು ರಂಗಗಳಲ್ಲಿ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತವೆ ಎಂದು ಹೇಳಿದ್ದಾರೆ. ಹೂಡಿಕೆದಾರರಿಗೆ ಎಚ್ಚರಿಕೆ ನೀಡಿದ ಅವರು ಅಂತಹ ಆಸ್ತಿಗಳಿಗೆ ಯಾವುದೇ ಆಧಾರವಾಗಿರುವ ಮೌಲ್ಯವಿಲ್ಲ ಎಂದು ತಿಳಿಸಿದ್ದಾರೆ.