ಅನೂಪ್ಗಢ(ರಾಜಸ್ಥಾನ) : ಪಾಕಿಸ್ತಾನದಿಂದ ತನ್ನ ಪ್ರಿಯಕರನನ್ನು ಭೇಟಿಯಾಗಲು ನಾಲ್ಕು ಮಕ್ಕಳ ತಾಯಿಯೊಬ್ಬಳು ಉತ್ತರಪ್ರದೇಶಕ್ಕೆ ಬಂದಿದ್ದ ಘಟನೆ ದೇಶಾದ್ಯಂತ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಭಾರತೀಯ ಮಹಿಳೆಯೊಬ್ಬರು ತನ್ನ ಪ್ರಿಯಕರನನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ತೆರಳಿದ್ದಳು. ಇದೀಗ ಇಂತಹುದೇ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ದೂರದ ಬಾಂಗ್ಲಾದೇಶದಿಂದ ಯುವತಿಯೊಬ್ಬಳು ತನ್ನ ರಾಜಸ್ಥಾನದ ಪ್ರಿಯಕರನನ್ನು ಭೇಟಿಯಾಗಲು ಗಡಿ ದಾಟಿ ಬಂದಿದ್ದಾಳೆ.
ಹಬೀಬಾ ಅಲಿಯಾಸ್ ಹನಿ ಬಾಂಗ್ಲಾದೇಶದಿಂದ ಬಂದ ಯುವತಿ. ಈಕೆ ಕಳೆದ ಎರಡು ದಿನಗಳ ಹಿಂದೆ ಅನೂಪ್ಗಢ ಜಿಲ್ಲೆಯ 13 ಡಾಲ್ ಗ್ರಾಮದ ರಾವ್ಲ ಮಂಡಿಗೆ ಆಗಮಿಸಿದ್ದು, ಗೆಳೆಯನ ಮನೆಯಲ್ಲಿ ವಾಸವಿದ್ದಳು. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಾಂಗ್ಲಾದೇಶದ ಹನಿ ಮತ್ತು ರೋಶನ್ ಇಬ್ಬರೂ ಸಾಮಾಜಿಕ ಜಾಲತಾಣದ ಮೂಲಕ ಪರಿಚಿತರಾಗಿದ್ದಾರೆ. ಇವರ ಪರಿಚಯ ಕ್ರಮೇಣ ಪ್ರೀತಿಗೆ ತಿರುಗಿದೆ. ಬಳಿಕ ಹನಿ ತನ್ನ ಪ್ರಿಯಕರನನ್ನು ಭೇಟಿಯಾಗಲು ಬಾಂಗ್ಲಾದೇಶದಿಂದ ಟೂರಿಸ್ಟ್ ವೀಸಾದಲ್ಲಿ ಭಾರತಕ್ಕೆ ಬಂದಿದ್ದಾರೆ. ಬಳಿಕ ಪ್ರಿಯಕರ ರೋಶನ್ನ ಮನೆಯಲ್ಲಿ ಕಳೆದೆರಡು ದಿನಗಳಿಂದ ವಾಸವಾಗಿದ್ದರು. ಈ ಬಗ್ಗೆ ಅನುಮಾನಗೊಂಡ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಪೊಲೀಸರು ಇಬ್ಬರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ, ಬಾಂಗ್ಲಾದೇಶ ಹನಿ ತನ್ನ ಪ್ರಿಯಕರನನ್ನು ಭೇಟಿಯಾಗಲು ಬಂದಿರುವ ಬಗ್ಗೆ ಮಾಹಿತಿ ನೀಡಿದ್ದಾಳೆ. ಈ ವೇಳೆ ಹನಿ ಬಾಂಗ್ಲಾದೇಶದಿಂದ ಕೊಲ್ಕತಾ- ದೆಹಲಿ ಮಾರ್ಗವಾಗಿ ಬಿಕನೇರ್ ತಲುಪಿರುವುದಾಗಿ ಮಾಹಿತಿ ಕೂಡಾ ಕೊಟ್ಟಿದ್ದಾಳೆ.