ನವದೆಹಲಿ:ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿಯ ಭೀಷ್ಮ ಎಲ್ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಉಮಾಭಾರತಿ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಸೇರಿದಂತೆ ಹಿರಿಯ ನಾಯಕರ ಖುಲಾಸೆ ಪ್ರಶ್ನಿಸಿ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸುಪ್ರೀಂಕೋರ್ಟ್ ಮೊರೆ ಹೋಗಲು ನಿರ್ಧರಿಸಿದೆ. 2020 ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಬಾಬರಿ ಮಸೀದಿ ಧ್ವಂಸ ಪ್ರಕರಣದ 32 ಆರೋಪಿಗಳನ್ನು ಖುಲಾಸೆಗೊಳಿಸಿತ್ತು.
ಪ್ರಕರಣವೇನು?:ರಾಮ ಜನ್ಮಸ್ಥಳ ಎಂದೇ ಗುರುತಿಸಲಾಗಿರುವ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಮುಸ್ಲಿಂ ಆಳ್ವಿಕೆಯ ವೇಳೆ ಹಿಂದೂ ದೇವಾಲಯ(ರಾಮಮಂದಿರ)ವನ್ನು ಕೆಡವಿ ಬಾಬರಿ ಮಸೀದಿ ಕಟ್ಟಲಾಗಿದೆ ಎಂದು, ಡಿಸೆಂಬರ್ 6, 1992 ರಂದು ಸಾವಿರಾರು ಹಿಂದೂ ಕರಸೇವಕರು ಬಾಬರಿ ಮಸೀದಿಯನ್ನು ಕೆಡವಿದ್ದರು.
ಇದಕ್ಕೆ ಬಿಜೆಪಿ ಹಿರಿಯ ನಾಯಕರಾದ ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಉಮಾಭಾರತಿ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಸೇರಿದಂತೆ ಭಾರತೀಯ ಜನತಾ ಪಕ್ಷದ ನಾಯಕರು ಕುಮ್ಮಕ್ಕು ನೀಡಿದ್ದರು ಎಂದು ಆಪಾದಿಸಲಾಗಿತ್ತು. ಇದರ ವಿರುದ್ಧ ಸಿಬಿಐ ತನಿಖೆ ನಡೆಸುತ್ತಿತ್ತು. ಸುದೀರ್ಘ ತನಿಖೆಯ ಬಳಿಕ ವಿಶೇಷ ನ್ಯಾಯಾಲಯ ಎಲ್ಲ ಆರೋಪಿಗಳನ್ನು ಪ್ರಕರಣದಿಂದ 2020 ರಲ್ಲಿ ಖುಲಾಸೆ ಮಾಡಿತು.
ರಾಮಜನ್ಮ ಭೂಮಿ ವಿವಾದದ ಕುರಿತು 2019 ರಲ್ಲಿ ಸುಪ್ರೀಂ ಕೋರ್ಟ್ ವಿವಾದಿತ ಜಾಗವನ್ನು ಹಿಂದೂಗಳಿಗೆ ಸೇರಿದ್ದು ಎಂದು ಐತಿಹಾಸಿಕ ತೀರ್ಪು ನೀಡಿತು. ಇದೀಗ ಆ ಜಾಗದಲ್ಲಿ ಈಗ ಭವ್ಯ ರಾಮಮಂದಿರ ನಿರ್ಮಾಣವಾಗುತ್ತಿದೆ. ಇದೀಗ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸಿಬಿಐ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಲಿದೆ ಎಂದು ಹೇಳಲಾಗಿದೆ.
ಓದಿ:ಪರಮಾಣು ದಾಳಿ.. ಪಾಶ್ಮಿಮಾತ್ಯ ರಾಷ್ಟ್ರಗಳ ಆರೋಪ ತಳ್ಳಿ ಹಾಕಿದ ಪುಟಿನ್