ಅಯೋಧ್ಯೆ (ಉತ್ತರ ಪ್ರದೇಶ): ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬೆಂಬಲಿಸಿ ಜೂನ್ 5 ರಂದು ರ‍್ಯಾಲಿ ನಡೆಸುವುದಾಗಿ ಉತ್ತರ ಪ್ರದೇಶದ ಅಯೋಧ್ಯೆ ಸ್ವಾಮೀಜಿಗಳ ಗುಂಪು ಪ್ರಕಟಿಸಿದೆ. ಅಲ್ಲದೇ, ಅನೇಕ ಲೋಪದೋಷದಿಂದ ಕೂಡಿದ ಎಂದು ಹೇಳಲಾಗುವ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆಯ ವಿರುದ್ಧವೂ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ.
ದೇಶದ ಅಗ್ರ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಸೇರಿದಂತೆ ಹಲವರು ಲೈಂಗಿಕ ಕಿರುಕುಳದ ಆರೋಪ ಪ್ರಕರಣದಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ನಡುವೆ ಬ್ರಿಜ್ ಭೂಷಣ್ ಅವರನ್ನು ಬೆಂಬಲಿಸಿ ಅಯೋಧ್ಯೆಯ ರಾಮ್ ಕಥಾ ಪಾರ್ಕ್‌ನಲ್ಲಿ ಅಯೋಧ್ಯೆಯ ಪ್ರಮುಖರು ಮತ್ತು ದೇಶದ ಇತರ ಧಾರ್ಮಿಕ ಸ್ಥಳಗಳಿಂದ ಬರುವ ಮುಖಂಡರು ರ‍್ಯಾಲಿ ನಡೆಸುವುದಾಗಿ ಮಹಂತ್ ಸತ್ಯೇಂದ್ರ ದಾಸ್ ತಿಳಿಸಿದ್ದಾರೆ.
ಇದೇ ವೇಳೆ ಪೋಕ್ಸೋ ಕಾಯ್ದೆಯಲ್ಲಿ ಹಲವು ಲೋಪದೋಷಗಳು ಮತ್ತು ದೋಷಪೂರಿತ ಷರತ್ತುಗಳಿವೆ. ಇದರಿಂದ ಇದನ್ನೂ ಕೂಡ ನಾವು ವಿರೋಧಿಸುತ್ತೇವೆ ಎಂದು ಮಹಂತ್ ಹೇಳಿದ್ದಾರೆ. ಮತ್ತೊಂದೆಡೆ, ಬ್ರಿಜ್ ಭೂಷಣ್ ನಿಕಟ ಸಹವರ್ತಿ, ಆಪ್ತ ಸಹಾಯಕ ಸುಭಾಷ್ ಸಿಂಗ್ ಮಾತನಾಡಿ, ದೇಶದ ಹಿರಿಯ ಸಂತರು ಮತ್ತು ದಾರ್ಶನಿಕರು ನೀಡಿದ ಕರೆಯ ಮೇರೆಗೆ ಈ ರ‍್ಯಾಲಿಯನ್ನು ಆಯೋಜಿಸಲಾಗಿದೆ. ಹರಿದ್ವಾರ, ಕಾಶಿ, ಮಥುರಾ ಮತ್ತು ದೇಶದ ಇತರ ಪುಣ್ಯಕ್ಷೇತ್ರಗಳು ಸೇರಿದಂತೆ ವಿವಿಧ ಸ್ಥಳಗಳಿಂದ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಬ್ರಿಜ್ ಭೂಷಣ್ ಶರಣ್ ಸಿಂಗ್ ಪ್ರಕರಣ; ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದ ಹೈಕೋರ್ಟ್