ಚಂಡೀಗಢ: ಪಂಜಾಬ್ ಸಶಸ್ತ್ರ ಪೊಲೀಸ್ (ಪಿಎಪಿ) ಇಲಾಖೆಯ ಉಪ ಅಧೀಕ್ಷಕ (ಡಿಎಸ್ಪಿ)ಯಾಗಿದ್ದ ಅರ್ಜುನ ಪ್ರಶಸ್ತಿ ಪುರಸ್ಕೃತ ವೇಟ್‌ಲಿಫ್ಟರ್ ದಲ್ಬೀರ್ ಸಿಂಗ್ ಅವರನ್ನು ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ನಾಲ್ಕು ದಿನಗಳ ಹಿಂದೆ ಜಲಂಧರ್‌ನಲ್ಲಿ ದಲ್ಬೀರ್ ಸಿಂಗ್ ಶವವಾಗಿ ಪತ್ತೆಯಾಗಿದ್ದರು. ಇದೀಗ ಇವರನ್ನು ಕೊಲೆ ಮಾಡಿರುವ ಮಾಹಿತಿ ಹೊರಬಿದ್ದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಟೋ ಚಾಲಕನೋರ್ವವನ್ನು ಪೊಲೀಸರು ಬಂಧಿಸಿದ್ದಾರೆ.
ವೇಟ್‌ಲಿಫ್ಟರ್ ಆಗಿದ್ದ 54 ವರ್ಷದ ದಲ್ಬೀರ್ ಸಿಂಗ್ 2000ರಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರು. ಸದ್ಯ ಪಂಜಾಬ್ ಸಶಸ್ತ್ರ ಪೊಲೀಸ್ (ಪಿಎಪಿ) ಇಲಾಖೆಯಲ್ಲಿ ಡಿಎಸ್ಪಿ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅವರನ್ನು ಜಲಂಧರ್‌ನ ಬಸ್ತಿ ಬಾವಾ ಖೇಲ್‌ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಸೋಮವಾರ ರಸ್ತೆಯಲ್ಲಿ ಅವರ ಮೃತದೇಹ ಪತ್ತೆಯಾಗಿದ್ದು, ಅವರ ದೇಹದ ಮೇಲೆ ಗಾಯದ ಗುರುತುಗಳು ಇರುವುದೂ ಸಹ ಕಂಡುಬಂದಿತ್ತು.
ಜಗಳ ಕೊಲೆಯಲ್ಲಿ ಅಂತ್ಯ: ದಲ್ಬೀರ್ ಸಿಂಗ್ ಶವವಾಗಿ ಪತ್ತೆಯಾದ ನಾಲ್ಕು ದಿನಗಳ ಅವರನ್ನು ಕೊಲೆ ಮಾಡಿರುವುದು ಬಯಲಾಗಿದೆ. ಈ ಘಟನೆಯ ದಿನ ದಲ್ಬೀರ್ ಸಿಂಗ್ ಹಾಗೂ ಆರೋಪಿಗಳು ಜಗಳ ನಡೆದಿದೆ. ಬಳಿಕ ಅಧಿಕಾರಿಯ ಸರ್ವೀಸ್ ಪಿಸ್ತೂಲ್‌ನಿಂದಲೇ ಹಂತಕರು ಕೊಲೆ ಮಾಡಿದ್ದಾರೆ. ಸದ್ಯ ಬಂಧಿತ ಆರೋಪಿ ಆಟೋ ಚಾಲಕನನ್ನು ವಿಜಯ್ ಕುಮಾರ್ ಎಂಬುವುದಾಗಿ ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.