ಕರ್ನಾಟಕ

karnataka

ETV Bharat / bharat

ಹರಿಯಾಣದ ಸೋನಿಪತ್‌ನಲ್ಲಿ ಗಲಭೆ: 16 ಮಂದಿ ಬಂಧನ - etv bharat kannada

ಹರಿಯಾಣದಲ್ಲಿ ಭಾನುವಾರ ತಡರಾತ್ರಿ ಕೆಲವು ಶಸ್ತ್ರಸಜ್ಜಿತ ದುಷ್ಕರ್ಮಿಗಳು ನಮಾಜ್ ಮಾಡುತ್ತಿದ್ದವರ ಮೇಲೆ ದಾಳಿ ಮಾಡಿರುವ ಘಟನೆ ನಡೆದಿದೆ.

attack-on-people-offering-namaz-in-mosque-in-sandal-kalan-village-sonipat-haryana
ಕೋಮು ಗಲಭೆ: 16 ಮಂದಿಯನ್ನು ಬಂಧಿಸಿದ ಪೊಲೀಸರು

By

Published : Apr 10, 2023, 6:30 PM IST

ಸೋನಿಪತ್ (ಹರಿಯಾಣ) :ಸೋನಿಪತ್ ಜಿಲ್ಲೆಯಲ್ಲಿ ಎರಡು ಕೋಮುಗಳ ನಡುವೆ ಗಲಭೆ ನಡೆದಿದೆ. ಸಂದಲ್ ಕಲಾನ್ ಎಂಬ ಗ್ರಾಮದಲ್ಲಿ ತಡರಾತ್ರಿ ರಂಜಾನ್ ಪ್ರಾರ್ಥನೆ ಸಲ್ಲಿಸುತ್ತಿದ್ದವರ ಮೇಲೆ 15 ರಿಂದ 20 ಶಸ್ತ್ರಧಾರಿಗಳು ದಾಳಿ ನಡೆಸಿದ್ದಾರೆ. ಘಟನೆಯ ನಂತರ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಈಗಾಗಲೇ 16 ಮಂದಿಯನ್ನು ಬಂಧಿಸಲಾಗಿದೆ. ಬಂಧಿತರೆಲ್ಲರೂ ಸಂದಲ್ ಕಲಾನ್ ಗ್ರಾಮದವರು ಎಂದು ಹೇಳಲಾಗುತ್ತಿದೆ. ಆರೋಪಿಗಳ ವಿಚಾರಣೆ ನಡೆಯುತ್ತಿದೆ. ಯಾರ ಸೂಚನೆಯ ಮೇರೆಗೆ ದಾಳಿ ಮಾಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.

ಘಟನೆಯ ನಡೆದಾಗ ಕಟ್ಟಡದ ಟೆರೇಸ್‌ನಲ್ಲಿದ್ದ ಜನರು ವಿಡಿಯೋ ಮಾಡಿದ್ದಾರೆ. ಈ ವಿಡಿಯೋದಲ್ಲಿ ಕೆಲವರು ಕೈಯಲ್ಲಿ ಕೋಲು ಹಿಡಿದುಕೊಂಡು ಗ್ರಾಮದ ಬೀದಿಗಳಲ್ಲಿ ಓಡಾಡುತ್ತಿರುವುದು ಕಂಡು ಬಂದಿದೆ. ಸಂದಲ್ ಕಲಾಂ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಹಲ್ಲೆ ನಡೆಸಿದ ಯುವಕರು ಕೂಡ ಸಂದಲ್ ಕಲನ್ ಗ್ರಾಮದ ನಿವಾಸಿಗಳು ಎನ್ನಲಾಗಿದೆ. ಘಟನೆಯ ಹಿಂದಿನ ನಿಖರ ಕಾರಣ ಸ್ಪಷ್ಟವಾಗಿಲ್ಲ.

ಶಸ್ತ್ರಸಜ್ಜಿತ ದುಷ್ಕರ್ಮಿಗಳ ದಾಳಿಯಿಂದ ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸೋನಿಪತ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂದಲ್ ಕಲನ್​ನ ಮೌಲ್ವಿ ಮೊಹಮ್ಮದ್ ಕೌಶರ್ ಮಾತನಾಡಿ, ನಾವು ನಮಾಜ್ ಮಾಡುತ್ತಿದ್ದಾಗ ಗ್ರಾಮದ ಕೆಲವರು ನಮ್ಮ ಮೇಲೆ ಹಲ್ಲೆ ನಡೆಸಿದರು ಎಂದು ಹೇಳಿದರು. ನಾವು ಯಾರೊಂದಿಗೂ ಜಗಳ ಮಾಡಿಲ್ಲ ಎಂದರು.

ಘಟನೆಗೆ ಸಂಬಂಧಿಸಿದಂತೆ ಸೋನಿಪತ್ ಪೊಲೀಸರಿಂದ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಈ ಹಿಂದೆ, ಸೋನಿಪತ್‌ನ ಖಾರ್ಖೋಡಾದಲ್ಲಿ ರಾಮನವಮಿ ದಿನ ನಿರ್ದಿಷ್ಟ ಧರ್ಮದ ಧಾರ್ಮಿಕ ಸ್ಥಳದಲ್ಲಿ ಧ್ವಜಾರೋಹಣ ಮಾಡಿದ ನಂತರ ಉದ್ವಿಗ್ನತೆ ಉಂಟಾಗಿತ್ತು. ಪೊಲೀಸರು ಕಾರ್ಯೋನ್ಮುಖರಾಗಿ ಅನಾಹುತ ತಪ್ಪಿಸಿದ್ದರು.

ಇದನ್ನೂ ಓದಿ:ಅಮೃತ್​ಪಾಲ್​ ಸಿಂಗ್​ ಸಹಚರ ಪಾಪಲ್​ಪ್ರೀತ್​ ಸಿಂಗ್​ ಬಂಧನ: ಹೋಶಿಯಾರ್​ಪುರದಲ್ಲಿ ಬಲೆಗೆ ಕೆಡವಿದ ಪಂಜಾಬ್​ ಪೊಲೀಸರು

ABOUT THE AUTHOR

...view details