ಹೈದರಾಬಾದ್ (ತೆಲಂಗಾಣ):ತೆಲಂಗಾಣದ 119 ಸದಸ್ಯ ಬಲದ ವಿಧಾನಸಭೆಯ ಚುನಾವಣಾ ಫಲಿತಾಂಶ ನಾಳೆ (ಡಿ.3ರಂದು) ಪ್ರಕಟವಾಗಲಿದೆ. ಆದರೆ, ಇದಕ್ಕೂ ಮುನ್ನ ಗುರುವಾರ ಪ್ರಕಟವಾದ ಎಕ್ಸಿಟ್ ಪೋಲ್ ಸಮೀಕ್ಷೆಗಳು ಆಡಳಿತಾರೂಢ ಬಿಆರ್ಎಸ್ಗೆ ಹಿನ್ನೆಡೆಯಾಗಲಿದ್ದು, ಪ್ರತಿಪಕ್ಷ ಕಾಂಗ್ರೆಸ್ಗೆ ಅನುಕೂಲವಾಗಲಿವೆ ಎಂದು ಭವಿಷ್ಯ ಹೇಳಿವೆ. ಆದ್ದರಿಂದ ರಾಜಕೀಯ ಪಕ್ಷಗಳಲ್ಲಿ ಹಲವು ರೀತಿಯ ಲೆಕ್ಕಾಚಾರಗಳು ಶುರುವಾಗಿವೆ. ಇದರ ನಡುವೆ ಎಕ್ಸಿಟ್ ಪೋಲ್ ಫಲಿತಾಂಶ ನೋಡಿ ಗಾಬರಿಯಾಗಬೇಡಿ ಮತ್ತು ಬಿಆರ್‌ಎಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬುವುದಾಗಿ ಬಿಆರ್‌ಎಸ್ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ಪಕ್ಷದ ಅಭ್ಯರ್ಥಿಗಳಿಗೆ ಧೈರ್ಯ ತುಂಬಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಚಿವರಾದ ಕೆಟಿಆರ್, ಹರೀಶ್ ರಾವ್ ಸೇರಿದಂತೆ ಹಲವು ಶಾಸಕರು, ಅಭ್ಯರ್ಥಿಗಳು ಹಾಗೂ ಪಕ್ಷದ ಮುಖಂಡರು ಶುಕ್ರವಾರ ಪ್ರಗತಿ ಭವನದಲ್ಲಿ ಸಿಎಂ ಕೆಸಿಆರ್ ಅವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಪಕ್ಷದ ಪರವಾಗಿರುವ ಅನುಕೂಲ ಹಾಗೂ ಪ್ರತಿಕೂಲ ಪರಿಸ್ಥಿತಿಗಳ ಕುರಿತು ಸಿಎಂಗೆ ನಾಯಕರು ಮಾಹಿತಿ ನೀಡಿದರು. ಇದೇ ಸಮಯದಲ್ಲಿ ಕೆಸಿಆರ್ ಮತ್ತೊಮ್ಮೆ ಸರ್ಕಾರ ರಚಿಸುವ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಹೈದರಾಬಾದ್ಗೆ ಹೋಗುತ್ತೇನೆ, ಪಾರ್ಟಿ ಕೆಲಸ ಏನಿದೆಯೋ ಅದನ್ನು ಮಾಡುತ್ತೇನೆ: ಡಿಸಿಎಂ ಡಿ ಕೆ ಶಿವಕುಮಾರ್
ಚುನಾವಣಾ ಫಲಿತಾಂಶ ಪ್ರಕಟವಾಗುವವರೆಗೂ ಪಕ್ಷದ ಕಾರ್ಯಕರ್ತರು ಶಾಂತವಾಗಿ. ಡಿ.3ರಂದು ಎಲ್ಲರೂ ಸೇರಿ ಸಂಭ್ರಮಾಚರಣೆ ಮಾಡೋಣ. ರಾಜ್ಯಕ್ಕೆ ಮತ್ತೊಮ್ಮೆ ಉತ್ತಮ ಆಡಳಿತ ನೀಡಲು ಬಿಆರ್‌ಎಸ್ ಹೊರಟಿದೆ ಎಂಬುವುದಾಗಿ ಕೆಸಿಆರ್ ತಿಳಿಸಿದರು. ಅಲ್ಲದೇ, ಜಿಲ್ಲೆಗಳ ನಾನಾ ಸಮುದಾಯಗಳ ಮುಖಂಡರನ್ನು ಕರೆಸಿ ಮತದಾನದ ಬಗ್ಗೆಯೂ ಮಾಹಿತಿ ಪಡೆದರು. ಕ್ಷೇತ್ರವಾರು ಮತದಾನ ಪ್ರಕ್ರಿಯೆಯನ್ನು ಸಿಎಂ ವಿಶ್ಲೇಷಿಸಿದರು. ಕೊನೆಯ ಗಂಟೆಯಲ್ಲಿ ಅಧಿಕ ಮತದಾನ ನಡೆದಿದ್ದು, ಎಕ್ಸಿಟ್ ಪೋಲ್‌ಗಳ ಭವಿಷ್ಯಕ್ಕಿಂತ ಭಿನ್ನ ಫಲಿತಾಂಶ ಬರುವ ಸಾಧ್ಯತೆ ಇದೆ ಎಂಬ ಬಗ್ಗೆ ಚರ್ಚಿಸಿದರು ಎಂದು ವರದಿಯಾಗಿದೆ. ಸಿಎಂ ಕೆಸಿಆರ್ ಅವರನ್ನು ಭೇಟಿಯಾದ ಬಳಿಕ ಹಲವು ಮುಖಂಡರು ಪ್ರಗತಿ ಭವನದಿಂದ ಖುಷಿಯಿಂದ ಹೊರಬಂದು ಗೆಲುವಿನ ಸಂಕೇತ ತೋರಿಸಿದರು.