ನವದೆಹಲಿ: ಕೇಂದ್ರದ ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್‌ಗೆ ಮಹತ್ವವಾಗಿರುವ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಡಿ.3ರಂದು ಹೊರಬರಲಿದೆ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢದಲ್ಲಿ ಕೇಸರಿ ಪಾಳಯ ಹಾಗೂ ಕೈ ಪಡೆ ಮಧ್ಯೆ ನೇರ ಪೈಪೋಟಿ ಇದ್ದರೆ, ತೆಲಂಗಾಣದಲ್ಲಿ ಆಡಳಿತ ಪಕ್ಷ ಬಿಆರ್‌ಎಸ್ ವಿರುದ್ಧ ಗೆಲುವಿಗಾಗಿ ಕಾಂಗ್ರೆಸ್ ತೀವ್ರ ಹಣಾಹಣಿಗೆ ಇಳಿದಿದೆ.
ಇತ್ತೀಚೆಗೆ ಮತದಾನ ಪೂರ್ಣಗೊಂಡ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ತೆಲಂಗಾಣ ವಿಧಾನಸಭೆ ಚುನಾವಣೆಯ ಮತ ಎಣಿಕೆ ಇಂದು ನಡೆಯಲಿದೆ. ಈ ರಾಜ್ಯ ಚುನಾವಣೆಗಳು ಮುಂಬರುವ ಸಾರ್ವತ್ರಿಕ ಚುನಾವಣೆಗೆ ನಿರ್ಣಾಯಕ ಸ್ಪರ್ಧೆ ಎಂದು ಪರಿಗಣಿಸಲಾಗಿದೆ. ಪ್ರಸ್ತುತ ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ಮತ್ತು ಮಧ್ಯಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿ, ಈ ಮೂರು ರಾಜ್ಯಗಳಲ್ಲಿ ನೇರ ಸ್ಪರ್ಧೆಯಲ್ಲಿ ತೊಡಗಿವೆ.
ಮೇ ತಿಂಗಳಲ್ಲಿ ಕರ್ನಾಟಕದಲ್ಲಿ ಬಿಜೆಪಿ ವಿರುದ್ಧ ಸಂಪೂರ್ಣ ಬಹುಮತದೊಂದಿಗೆ ಗೆದ್ದಿರುವ ಕಾಂಗ್ರೆಸ್ ಮಧ್ಯಪ್ರದೇಶ ಮತ್ತು ತೆಲಂಗಾಣದ ಮೇಲೆ ಕಣ್ಣಿಟ್ಟಿದೆ. ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಮತ್ತೊಂದೆಡೆ, ತೆಲಂಗಾಣದಲ್ಲಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್‌ಎಸ್ ಹ್ಯಾಟ್ರಿಕ್ ಗೆಲುವಿನ ಗುರಿ ಹೊಂದಿದೆ. ಆದರೆ, ಕಾಂಗ್ರೆಸ್ ಮತ್ತು ಬಿಜೆಪಿಯಿಂದ ತೀವ್ರ ಪೈಪೋಟಿ ಎದುರಿಸುತ್ತಿದೆ. ಹೀಗಾಗಿ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶದತ್ತ ಇಡೀ ದೇಶದ ಚಿತ್ತ ನೆಟ್ಟಿದೆ.
ನಿಜವಾಗುವುದೇ ಎಕ್ಸಿಟ್ ಪೋಲ್ ಭವಿಷ್ಯ?: ನ.30ರಂದು ಎಲ್ಲ ರಾಜ್ಯಗಳಲ್ಲಿ ಮತದಾನದ ಪ್ರಕ್ರಿಯೆಗಳು ಪೂರ್ಣವಾದ ವಿವಿಧ ಸಂಸ್ಥೆಗಳು ಚುನಾವಣೋತ್ತರ ಪರೀಕ್ಷೆಗಳನ್ನು ಪ್ರಕಟಿಸಿವೆ. ಇವುಗಳ ಪ್ರಕಾರ, ಬಿಜೆಪಿ ಮಧ್ಯಪ್ರದೇಶದಲ್ಲಿ ಅಧಿಕಾರಕ್ಕೆ ಉಳಿಸಿಕೊಳ್ಳುವುದರ ಜೊತೆಗೆ ರಾಜಸ್ಥಾನದಲ್ಲಿ ಗೆಲ್ಲುವ ಸಾಧ್ಯತೆ ಇದೆ. ಇದೇ ವೇಳೆ, ಮಧ್ಯಪ್ರದೇಶದಲ್ಲಿ ಬಿಜೆಪಿ - ಕಾಂಗ್ರೆಸ್ ನೇರ ಹಣಾಹಣಿ ನಡೆಯಲಿದೆ ಎಂದು ಕೆಲ ಸಮೀಕ್ಷೆಗಳು ಹೇಳಿವೆ.
ಮತ್ತೊಂದೆಡೆ, ರಾಜಸ್ಥಾನದಲ್ಲಿ ಕಾಂಗ್ರೆಸ್‌ಗೆ ಅಧಿಕಾರ ಕೈತಪ್ಪಿದರೂ, ಛತ್ತೀಸ್‌ಗಢದಲ್ಲಿ ಅಧಿಕಾರದಲ್ಲಿ ಮುಂದುವರೆಯಲಿದೆ. ಜೊತೆಗೆ ತೆಲಂಗಾಣದಲ್ಲಿ ಬಿಆರ್‌ಎಸ್ ಹಿಂದಿಕ್ಕಿ ಆಡಳಿತಕ್ಕೆ ಬರಲಿದೆ ಎಂದು ಎಕ್ಸಿಟ್ ಪೋಲ್ಗಳು ಭವಿಷ್ಯ ನುಡಿದಿವೆ. ಹೀಗಾಗಿ ಎಲ್ಲ ರಾಜಕೀಯ ಪಕ್ಷಗಳಲ್ಲಿ ಹೊಸ ಲೆಕ್ಕಾಚಾರಗಳು ಶುರುವಾಗಿವೆ. ಆದರೆ, ಇವುಗಳಿಗೆ ಇಂದು ಪ್ರಕಟವಾಗಲಿರುವ ಅಧಿಕೃತ ಫಲಿತಾಂಶಗಳು ಮಧ್ಯಾಹ್ನದ ವೇಳೆಗೆ ಸಂಪೂರ್ಣ ಉತ್ತರ ನೀಡಲಿದೆ.