ಗುವಾಹಟಿ: ಅಸ್ಸಾಂನಲ್ಲಿ ಸುರಿದ ಭಾರಿ ಮಳೆಗೆ ಪ್ರವಾಹ ಸ್ಥಿತಿ ತಲೆದೋರಿದೆ. ಪ್ರಸ್ತುತ ರಾಜ್ಯದ ಏಳು ಜಿಲ್ಲೆಗಳಲ್ಲಿ ಸುಮಾರು 57,000 ಜನರು ಪ್ರವಾಹದಿಂದ ನಲುಗಿ ಹೋಗಿದ್ದು, ಈವರೆಗೆ ಮಗು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಸ್ಸಾಂ ಮತ್ತು ನೆರೆಯ ರಾಜ್ಯಗಳಾದ ಮೇಘಾಲಯ, ಅರುಣಾಚಲ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿದ್ದು ಹಲವು ನದಿಗಳ ನೀರಿನ ಮಟ್ಟ ಹೆಚ್ಚುತ್ತಿದೆ. ಸುಮಾರು 222 ಗ್ರಾಮಗಳು ಹಾನಿಗೊಳಗಾಗಿವೆ, 10321.44 ಹೆಕ್ಟೇರ್ ಕೃಷಿ ಭೂಮಿ ಪ್ರವಾಹದ ನೀರಿನಲ್ಲಿ ಮುಳುಗಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರವಾಹ ವರದಿ ತಿಳಿಸಿದೆ.
ಮನುಷ್ಯರನ್ನು ಹೊರತುಪಡಿಸಿ 1,434 ಪ್ರಾಣಿಗಳಿಗೂ ಪ್ರವಾಹದ ಬಿಸಿ ತಟ್ಟಿದ್ದು, ಒಟ್ಟು 202 ಮನೆಗಳಿಗೆ ಹಾನಿಯಾಗಿದೆ. ಸೇನೆ, ಅರೆ ಮಿಲಿಟರಿ ಪಡೆಗಳು, ಎಸ್‌ಡಿಆರ್‌ಎಫ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ನಡೆಸುತ್ತಿವೆ. ಹೋಜೈ, ಲಖಿಂಪುರ ಮತ್ತು ನಾಗಾಂವ್ ಜಿಲ್ಲೆಗಳಲ್ಲಿ ಹಲವಾರು ರಸ್ತೆಗಳು, ಸೇತುವೆಗಳು ಮತ್ತು ಕಾಲುವೆಗಳು ಹಾನಿಗೊಳಗಾಗಿವೆ.