ಗುವಾಹಟಿ (ಅಸ್ಸೋಂ): ಗುರುವಾರ ಬೆಳಗ್ಗೆ ಅಸ್ಸೋಂನ ಗುವಾಹಟಿಯಲ್ಲಿ ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಮಾಹಿತಿ ನೀಡಿದೆ. ಆದರೆ, ಭೂಕಂಪದಿಂದ ಯಾವುದೇ ಪ್ರಾಣಹಾನಿ ಮತ್ತು ಆಸ್ತಿ ಹಾನಿಯಾಗಿರುವ ಕುರಿತು ಇನ್ನೂ ವರದಿಯಾಗಿಲ್ಲ.
ಎನ್‌ಸಿಎಸ್ ಹಂಚಿಕೊಂಡ ಮಾಹಿತಿಯ ಪ್ರಕಾರ, ಗುರುವಾರ ಬೆಳಗ್ಗೆ 5.42ಕ್ಕೆ ಗುವಾಹಟಿಯಲ್ಲಿ ಭೂಮಿ ಕಂಪನದ ಅನುಭವವಾಗಿದೆ. ಭೂಕಂಪದ ಕೇಂದ್ರ ಬಿಂದುವನ್ನು 26.63 ಅಕ್ಷಾಂಶ ಮತ್ತು 92.08 ರೇಖಾಂಶದಲ್ಲಿ ಕಂಡು ಬಂದಿದೆ. 5 ಕಿಮೀ ಆಳದಲ್ಲಿ ಭೂಮಿ ಕಂಪಿಸಿದೆ ಎಂದು ಎನ್‌ಸಿಎಸ್ ತಿಳಿಸಿದೆ.
ಕಳೆದ ಜೂನ್ ತಿಂಗಳಿನಲ್ಲೂ ಗುವಾಹಟಿ ನಗರದಲ್ಲಿ ಭೂಮಿ ಕಂಪಿಸಿರುವ ಕುರಿತು ವರದಿಯಾಗಿತ್ತು. ರಿಕ್ಟರ್ ಮಾಪಕದಲ್ಲಿ 4.8 ಭೂಕಂಪನದ ತೀವ್ರತೆ ದಾಖಲಾಗಿತ್ತು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ ಮಾಹಿತಿ ನೀಡಿತ್ತು. ಬಾಂಗ್ಲಾದೇಶದ ಸಿಲ್ಹೆಟ್ ಪ್ರದೇಶದ 70 ಕಿ.ಮೀ. ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಕಂಡು ಬಂದಿತ್ತು. ಆಗ 20 ಸೆಕೆಂಡುಗಳವರೆಗೆ ಭೂಮಿ ನಡುಗಿತ್ತು. ಅಸ್ಸೋಂನ ಗುವಾಹಟಿ ಹಾಗೂ ಈಶಾನ್ಯ ಪ್ರದೇಶದ ಇತರ ಭಾಗದ ಜನರಿಗೆ ಭೂಕಂಪನದ ಅನುಭವ ಆಗಿತ್ತು. ಭೂಕಂಪದಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
ಅದೇ ಜೂನ್ ತಿಂಗಳಲ್ಲಿ ಅಸ್ಸೋಂನಲ್ಲಿ 3.6 ತೀವ್ರತೆಯ ಭೂಕಂಪ ಸಂಭವಿಸಿದ ಘಟನೆ ನಡೆದಿತ್ತು. ತೇಜ್ಪುರದ ಪಶ್ಚಿಮದಿಂದ 39 ಕಿ.ಮೀ ದೂರದಲ್ಲಿ 10 ಕಿಮೀ ಆಳದಲ್ಲಿ ಭೂಕಂಪದ ಕೇಂದ್ರ ಪತ್ತೆಯಾಗಿತ್ತು. ರಿಕ್ಟರ್ ಮಾಪಕದಲ್ಲಿ 3.6 ಭೂಕಂಪದ ತೀವ್ರತೆ ದಾಖಲಾಗಿತ್ತು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿತ್ತು.
ಉತ್ತರಪ್ರದೇಶದ 50 ಜಿಲ್ಲೆಗಳಲ್ಲಿ ಇತ್ತೀಚೆಗೆ ಭೂಕಂಪ:ರಾಜಧಾನಿ ಲಖನೌ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಅಕ್ಟೋಬರ್ 3ರಂದು ಮಧ್ಯಾಹ್ನ 2.53ರ ವೇಳೆಯಲ್ಲಿ ಭೂಕಂಪ ಸಂಭವಿಸಿತ್ತು. ಇದಾದ ಒಂದು ತಿಂಗಳ ನಂತರ, ಅಂದ್ರೆ ನವೆಂಬರ್ 3ರಂದು ರಾತ್ರಿ 11.32ರ ಸುಮಾರಿಗೆ ಲಖನೌ ಸೇರಿದಂತೆ 50 ಜಿಲ್ಲೆಗಳಲ್ಲಿ ಮತ್ತೊಮ್ಮೆ ಭೂಮಿ ಕಂಪಿಸಿದ ಅನುಭವವಾಗಿತ್ತು. ನೇಪಾಳದ 10 ಕಿಲೋ ಮೀಟರ್ ಆಳದ ಪ್ರದೇಶದಲ್ಲಿ ಭೂಕಂಪದ ಕೇಂದ್ರಬಿಂದು ಕಂಡು ಬಂದಿತ್ತು.
ಭೂಮಿ ಕಂಪಿಸಿದ ಅನುಭವವಾದ ಬಳಿಕ ಜನರು ಮನೆಯಿಂದ ಹೊರ ಓಡಿ ಬಂದಿದ್ದರು. ಕಠ್ಮಂಡುವಿನಲ್ಲಿ ಸಂಭವಿಸಿದ ಭೂಕಂಪದ ತೀವ್ರತೆ 6.4ರಷ್ಟು ರಿಕ್ಟರ್ ಮಾಪಕದಲ್ಲಿ ದಾಖಲಾಗಿತ್ತು. ಲಖನೌ, ಸೀತಾಪುರ, ಬರೇಲಿ, ಲಖಿಂಪುರ, ಮೀರತ್, ಗೋರಖ್‌ಪುರ, ಹರ್ದೋಯಿ, ಜೌನ್‌ಪುರ ಸೇರಿದಂತೆ 50ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿತ್ತು.
ಇದನ್ನೂ ಓದಿ:Earthquake shocks: ಉತ್ತರಪ್ರದೇಶದ 50 ಜಿಲ್ಲೆಗಳಲ್ಲಿ ನಡುಗಿದ ಭೂಮಿ.. ಮನೆ ಬಿಟ್ಟು ಓಡಿ ಬಂದ ಜನರು