ಹೈದರಾಬಾದ್:ಮಹತ್ವದ ಬೆಳವಣಿಗೆಯೊಂದರಲ್ಲಿ ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ (ಎಂಸಿಸಿ) ಮೂರನೇ ಸುತ್ತಿನ ನೀಟ್ ಪಿಜಿ ವೈದ್ಯಕೀಯ ಕೌನ್ಸೆಲಿಂಗ್‌ಗೆ ಇದ್ದ ಅರ್ಹತಾ ಅಂಕಗಳು (ಕಟ್ ಆಫ್) ರದ್ದುಗೊಳಿಸುವುದಾಗಿ ಘೋಷಿಸಿದೆ. ಇದರಿಂದಾಗಿ ಪ್ರಸಕ್ತ ವರ್ಷ ನೀಟ್ ಪರೀಕ್ಷೆ ಬರೆಯುವ ಅಭ್ಯರ್ಥಿಗಳೆಲ್ಲರೂ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆಯಲಿದ್ದಾರೆ.
ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಈ ಕ್ರಮಕ್ಕೆ ಅನುಮೋದನೆ ನೀಡಿದ್ದು, ಕಟ್ ಆಫ್ ಅಂಕಗಳನ್ನು ಶೂನ್ಯಕ್ಕೆ ಇಳಿಸಿದ್ದರಿಂದ ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟುಗಳಿಗೆ ಸ್ಪರ್ಧಿಸಲು ಎಲ್ಲ ವಿದ್ಯಾರ್ಥಿಗಳಿಗೆ ಅವಕಾಶ ಸಿಗಲಿದೆ.
ಈ ಹಿಂದೆ, ನೀಟ್ ಪಿಜಿ ಕೌನ್ಸೆಲಿಂಗ್‌ನ ಅರ್ಹತಾ ಮಾನದಂಡವು ಸಾಮಾನ್ಯ ವರ್ಗಕ್ಕೆ ಒಟ್ಟು 800 ಅಂಕಗಳಲ್ಲಿ 291 ಮತ್ತು ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ 257 ಅಂಕಗಳ ಕನಿಷ್ಠ ಕಟ್-ಆಫ್ ಅಂಕವನ್ನು ಕಡ್ಡಾಯಗೊಳಿಸಿತ್ತು. ಇದರಿಂದಾಗಿ ಇಷ್ಟು ಅಂಕ ಗಳಿಸಲು ವಿಫಲವಾದ ವಿದ್ಯಾರ್ಥಿಗಳು ಮೂರನೇ ಸುತ್ತಿನ ಕೌನ್ಸೆಲಿಂಗ್ನಲ್ಲಿ ಪಾಲ್ಗೊಳ್ಳಲು ಅವಕಾಶ ಇರಲಿಲ್ಲ. ಇದೀಗ ಎಲ್ಲರೂ ಕೌನ್ಸೆಲಿಂಗ್ನಲ್ಲಿ ಭಾಗಿಯಾಗಬಹುದಾಗಿದೆ.
ಅಂಕ ರದ್ದಿನಿಂದ ಲಾಭವೇನು?:ಅರ್ಹತಾ ಕನಿಷ್ಠ ಅಂಕ ರದ್ದಾದ್ದರಿಂದ ಮೂರನೇ ಸುತ್ತಿನ ಕೌನ್ಸೆಲಿಂಗ್‌ಗೆ ಎಲ್ಲ ವಿದ್ಯಾರ್ಥಿಗಳು ತೆರಳಲಿದ್ದು, 13,000 ಕ್ಕೂ ಹೆಚ್ಚು ಖಾಲಿ ಸೀಟುಗಳಿಗೆ ಪೈಪೋಟಿ ನಡೆಯಲಿದೆ. ಇದು ಅಭ್ಯರ್ಥಿಗಳು ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳನ್ನು ಮಾಡುವ ಅವರ ಕನಸುಗಳನ್ನು ಸಾಕಾರ ಮಾಡಲಿದೆ.