ಸಾಂಬಾ(ಜಮ್ಮು ಕಾಶ್ಮೀರ): ಭಯೋತ್ಪಾದಕರ ಗುಂಡಿಗೆ ಬಲಿಯಾದ ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಸರ್ಕಾರಿ ಶಾಲೆಯ ಶಿಕ್ಷಕಿ ರಜನಿ ಬಾಲ ಅವರ ಅಂತ್ಯಕ್ರಿಯೆಯನ್ನು ಬುಧವಾರ ನೆರವೇರಿಸಲಾಯಿತು. ರಜನಿ ಬಾಲಾ ಅವರ ಪತಿ ರಾಜಕುಮಾರ್ ವಿಧಿವಿಧಾನಗಳನ್ನು ಪೂರೈಸಿದರು. ‘ರಜನಿ ಬಾಲಾ ಅಮರ್ ರಹೇ, ಅಮರ್ ರಹೇ’ ಎಂಬ ಘೋಷಣೆಗಳನ್ನು ಕೂಗುವ ಮೂಲಕ ಜನರು ಅವರಿಗೆ ಕಣ್ಣೀರಿನಿಂದ ಬೀಳ್ಕೊಟ್ಟರು.
ಶಿಕ್ಷಕಿ ರಜನಿ ಬಾಲಾ ಅಂತ್ಯಕ್ರಿಯೆ ಗೋಪಾಲಪುರದ ಸರ್ಕಾರಿ ಶಾಲೆಯಲ್ಲಿ ನಿಯೋಜಿತರಾಗಿದ್ದ ರಜನಿ ಬಾಲಾ ಅವರ ತಲೆಗೆ ಉಗ್ರರು ಮಂಗಳವಾರ ಗುಂಡು ಹಾರಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕಣಿವೆಯಲ್ಲಿ ಕಾಶ್ಮೀರಿ ಪಂಡಿತರ ಹತ್ಯೆಗಳ ಹಿನ್ನೆಲೆ ಅವರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವಂತೆ ಪತ್ನಿ ರಜನಿ ಮತ್ತು ನಾನು ಆಡಳಿತಕ್ಕೆ ಹಲವು ಬಾರಿ ಮನವಿ ಮಾಡಿದ್ದೇವೆ. ಸೋಮವಾರ ರಾತ್ರಿಯೇ ತಮ್ಮ ಹಾಗೂ ಪತ್ನಿಯ ವರ್ಗಾವಣೆ ಆದೇಶ ಬಂದಿದೆ ಎಂದು ತಿಳಿಸಿದರು. ಆಡಳಿತ ಈ ಹಿಂದೆಯೇ ಆಕೆಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದರೆ ಇಂದು ರಜನಿ ಬದುಕಿರುತ್ತಿದ್ದಳು ಎಂದು ಸರ್ಕಾರಿ ಶಾಲೆಯ ಶಿಕ್ಷಕ ಹಾಗೂ ರಜನಿ ಅವರ ಪತಿ ರಾಜ್‌ಕುಮಾರ್ ಹೇಳಿದರು.
ಓದಿ:ಕುಲ್ಗಾಮ್: ಕಾಶ್ಮೀರಿ ಪಂಡಿತ ಶಿಕ್ಷಕಿಯನ್ನು ಗುಂಡಿಟ್ಟು ಹತ್ಯೆಗೈದ ಉಗ್ರರು!
ಪ್ರತಿಭಟನೆ: ಹಿಂದೂ ಪಂಡಿತ ಸಮುದಾಯದ ಶಾಲಾ ಶಿಕ್ಷಕಿಯ ಹತ್ಯೆಯನ್ನು ವಿರೋಧಿಸಿ ಜಮ್ಮು ಮತ್ತು ಕಾಶ್ಮೀರದ ವಿವಿಧ ಭಾಗಗಳಲ್ಲಿ ಜಮ್ಮು, ಸಾಂಬಾ ಮತ್ತು ಕಥುವಾ ಜಿಲ್ಲೆಗಳಲ್ಲಿ ಸತತ ಎರಡನೇ ದಿನವೂ ಪ್ರತಿಭಟನೆಗಳು ಮುಂದುವರೆದಿದೆ. ಪ್ರತಿಭಟನಾಕಾರರು ಬುಧವಾರ ಸಾಂಬಾದಲ್ಲಿ ಜಮ್ಮು-ಪಠಾಣ್‌ಕೋಟ್ ಹೆದ್ದಾರಿಯನ್ನು ತಡೆದು ರಜನಿಬಾಲಾ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ವಿಫಲರಾದ ಅಧಿಕಾರಿಗಳನ್ನು ವಜಾಗೊಳಿಸುವಂತೆ ಒತ್ತಾಯಿಸಿದರು.
ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿದ ರೈನಾ: ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ ಸಾಂಬಾದಲ್ಲಿ ದುಃಖತಪ್ತ ಕುಟುಂಬವನ್ನು ಭೇಟಿಯಾದರು. ಅಲ್ಲಿ ಅವರು ಪ್ರತಿಭಟನೆಯ ಬಿಸಿಯನ್ನು ಎದುರಿಸಬೇಕಾಯಿತು. ಕಣಿವೆಯ ಹಿಂದೂ ಜನಸಂಖ್ಯೆಯನ್ನು ಗುರಿಯನ್ನಾಗಿಸಿ ದಾಳಿ ಮಾಡಲಾಗುತ್ತಿದೆ. ಪಾಕಿಸ್ತಾನಿ ಭಯೋತ್ಪಾದಕರು ನಿರಂತರವಾಗಿ ಹಿಂದೂ ಸಮುದಾಯದ ಮೇಲೆ ದಾಳಿ ನಡೆಸುತ್ತಿರುವುದರಿಂದ ಅವರ ಭದ್ರತೆಗಾಗಿ ಯೋಜನೆಯನ್ನು ಸಿದ್ಧಪಡಿಸುವ ತುರ್ತು ಅಗತ್ಯವಿದೆ ಎಂದು ರೈನಾ ಹೇಳಿದರು.
ಪ್ರತಿಭಟನಾಕಾರರು ಹೆದ್ದಾರಿಯಲ್ಲಿ ಧರಣಿ ನಡೆಸಿ ಸಂಚಾರ ತಡೆ ನಡೆಸಿದರು. ಪ್ರತಿಭಟನಾಕಾರರು ಜವಾಬ್ದಾರಿಯುತ ಅಧಿಕಾರಿಗಳನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿದರು. ವಿಶೇಷವಾಗಿ ಕುಲ್ಗಾಮ್‌ನ ಸಿಇಒ ಅವರನ್ನು ವಜಾಗೊಳಿಸಬೇಕು. ವರ್ಗಾವಣೆಗಾಗಿ ರಜನಿ ಬಾಲಾ ವಿನಂತಿಯನ್ನು ಸಿಇಒ ಪದೇ ಪದೇ ತಿರಸ್ಕರಿಸಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಕಣಿವೆಯ ಸರ್ಕಾರಿ ಕಚೇರಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಿಂದೂಗಳನ್ನು ರಕ್ಷಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ ಮತ್ತು ಆಡಳಿತದ ಪ್ರತಿಕೃತಿಗಳನ್ನು ಸುಟ್ಟುಹಾಕಿದರು.