ನವದೆಹಲಿ:ಭಾರತೀಯ ಚುನಾವಣಾ ಆಯೋಗವು ಫೆಬ್ರವರಿ 11 ರವರೆಗೆ ಭೌತಿಕ ರ‍್ಯಾಲಿಗಳ ಮೇಲಿನ ನಿಷೇಧ ವಿಸ್ತರಿಸಿ ಆದೇಶ ನೀಡಿದೆ. ಈ ಬೆನ್ನಲ್ಲೇ ಕಾಂಗ್ರೆಸ್ ವರ್ಚುಯಲ್ ಪ್ರಚಾರಕ್ಕೆ ಸನ್ನದ್ಧವಾಗಿದೆ.
ಈ ಸಂಬಂಧ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ಎಲ್ಲಾ ಅಭ್ಯರ್ಥಿಗಳು ಮತ್ತು ಪಂಚ ರಾಜ್ಯಗಳ ರಾಜ್ಯ ಕಾಂಗ್ರೆಸ್ ಮುಖ್ಯಸ್ಥರಿಗೆ ವರ್ಚುಯಲ್ ಪ್ರಚಾರಕ್ಕಾಗಿ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ಪತ್ರ ಬರೆದಿದ್ದಾರೆ. ಜಲಂಧರ್‌ನಲ್ಲಿ ರಾಹುಲ್ ಗಾಂಧಿ ಅವರ ವರ್ಚುಯಲ್ ರ‍್ಯಾಲಿಯಲ್ಲಿ ಅಳವಡಿಸಿಕೊಂಡ ಮಾದರಿ ಅಳವಡಿಸಿಕೊಳ್ಳುವಂತೆ ಎಲ್ಲ ಐದು ರಾಜ್ಯಗಳ ಕಾಂಗ್ರೆಸ್ ಮುಖ್ಯಸ್ಥರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಚುನಾವಣಾ ಆಯೋಗದ ನಿಯಮಗಳ ಅಡಿ ವರ್ಚುಯಲ್ ರ‍್ಯಾಲಿಗೆ ಸಿದ್ಧತೆ ಮಾಡಿಕೊಳ್ಳಿ, ಸುಮಾರು 300-500 ಜನರನ್ನು ಒಟ್ಟುಗೂಡಿಸಲು ಅನುಕೂಲವಾಗುವಂತಹ ಎಲ್‌ಇಡಿ ಪರದೆಗಳನ್ನು ಸ್ಥಾಪಿಸುವುದು ಅಗತ್ಯವಾಗಿದೆ. ಆ ಸಂಬಂಧ ಅನುಮತಿ ಪಡೆದುಕೊಂಡು ಪ್ರಚಾರಕ್ಕೆ ಎಲ್ಲ ವ್ಯವಸ್ಥೆ ಮಾಡಿಕೊಳ್ಳಿ ಎಂದು ವೇಣುಗೋಪಾಲ ಸೂಚನೆ ಹಾಗೂ ಸಲಹೆ ನೀಡಿದ್ದಾರೆ.
ರಾಷ್ಟ್ರೀಯ ನಾಯಕರ ಭಾಷಣಗಳು ಪ್ರತಿಯೊಬ್ಬ ಮತದಾರರನ್ನು ತಲುಪುವಂತೆ ನೋಡಿಕೊಳ್ಳಲು ಕಾಂಗ್ರೆಸ್ ಪ್ರತಿ ವಿಧಾನಸಭಾ ಸ್ಥಾನಕ್ಕೂ ಒಬ್ಬ ಸಂಯೋಜಕರನ್ನು ನೇಮಿಸಿದೆ. ಪ್ರತಿ ವರ್ಚುಯಲ್ ರ‍್ಯಾಲಿ ನಂತರ, ಜನರಿಗಾಗಿ ಆಯೋಜಿಸಲಾದ ಶಿಬಿರಗಳ ವರದಿಯನ್ನು ಫೋಟೋಗಳೊಂದಿಗೆ ಪಕ್ಷದ ಪ್ರಧಾನ ಕಚೇರಿಗೆ ಕಳುಹಿಸಬೇಕು ಎಂದು ಪಕ್ಷವು ಸೂಚನೆಗಳನ್ನು ನೀಡಿದೆ.
ಮೂಲಗಳ ಪ್ರಕಾರ ವರ್ಚುಯಲ್ ಸೆಟ್ ಅಪ್ ಮತ್ತು ವ್ಯವಸ್ಥೆಯ ಹಿಂದಿನ ಲಾಜಿಸ್ಟಿಕ್ಸ್ ಕುರಿತು ಚರ್ಚಿಸಲು, ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥ ರೋಹನ್ ಗುಪ್ತಾ ಇತ್ತೀಚೆಗೆ ಪಕ್ಷದ ನಾಯಕತ್ವದೊಂದಿಗೆ ಸಭೆ ನಡೆಸಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಫೆಬ್ರವರಿ 2 ರಂದು ರಾಹುಲ್ ಗಾಂಧಿ ಗೋವಾದಲ್ಲಿ ವರ್ಚುಯಲ್ ರ‍್ಯಾಲಿ ನಡೆಸಲಿದ್ದರೆ, ಪ್ರಿಯಾಂಕಾ ಗಾಂಧಿ ವಾದ್ರಾ ಅದೇ ದಿನ ಡೆಹ್ರಾಡೂನ್‌ನಲ್ಲಿ ಕಾಂಗ್ರೆಸ್ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದ್ದಾರೆ.
ಪಠಾಣ್ಕೋಟ್ ಕ್ಷೇತ್ರದಿಂದ ಅಶ್ವನಿ ಕುಮಾರ್ ಶರ್ಮಾ ನಾಮಪತ್ರ
ಪಠಾಣ್ಕೋಟ್( ಪಂಜಾಬ್): ಇನ್ನು ಪಂಜಾಬ್ನಲ್ಲಿ ಬಿಜೆಪಿ ಈ ಬಾರಿ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ದೇಶದ ಗಮನ ಸೆಳೆದಿರುವ ಹಾಗೂ ಪ್ರತಿಷ್ಠಿಯ ಕ್ಷೇತ್ರ ಪಠಾಣ್ಕೋಟ್ ವಿಧಾನಸಭಾ ಕ್ಷೇತ್ರದಿಂದ, ಭಾರತೀಯ ಜನತಾ ಪಕ್ಷದ ಪಂಜಾಬ್ ಘಟಕದ ಅಧ್ಯಕ್ಷ ಅಶ್ವನಿ ಕುಮಾರ್ ಶರ್ಮಾ ನಾಮಿನೇಷನ್ ಸಲ್ಲಿಕೆ ಮಾಡಿದ್ದಾರೆ.
ಇದನ್ನು ಓದಿ:ಇಂದು ಕೇಂದ್ರ ಆಯವ್ಯಯ: ಮೋದಿ ಸರ್ಕಾರದಿಂದ ಆರ್ಥಿಕತೆಗೆ ಸಿಗುತ್ತಾ ಬೂಸ್ಟರ್ ಬಜೆಟ್?