ನವದೆಹಲಿ: ಪಂಜಾಬ್‌ನಲ್ಲಿ ಕಾಂಗ್ರೆಸ್ ಶಾಸಕನ ಬಂಧನಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ನಾಯಕರ ನಡುವೆ ವಾಗ್ವಾದ ನಡೆಯುತ್ತಿದ್ದು, ಇಂಡಿಯಾ ಮೈತ್ರಿ ಕೂಟದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆ ಆಮ್ ಆದ್ಮಿ ಪಕ್ಷದ (ಎಎಪಿ) ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸ್ಪಷ್ಟನೆ ನೀಡಿದ್ದಾರೆ. ವಿಪಕ್ಷಗಳ ಇಂಡಿಯಾ ಮೈತ್ರಿಕೂಟಕ್ಕೆ ನಾವು ಸಂಪೂರ್ಣವಾಗಿ ಬದ್ಧವಾಗಿದ್ದೇವೆ ಮತ್ತು ಒಕ್ಕೂಟದಿಂದ ಹೊರ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ದೇಶದ ಪ್ರತಿಯೊಬ್ಬ ವ್ಯಕ್ತಿಯೂ ತಾನು ಪ್ರಧಾನಿ ಎಂದು ಭಾವಿಸುವಂತಹ ವ್ಯವಸ್ಥೆಯನ್ನು ರೂಪಿಸಬೇಕು ಎಂಬುದು ನಮ್ಮ ಏಕೈಕ ನಿಲುವು ಎಂದ ಅವರು, ಪ್ರತಿಪಕ್ಷಗಳ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಪ್ರಕ್ರಿಯೆ ಅಂತಿಮಗೊಳಿಸಲಾಗಿಲ್ಲವೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ, ಅದಷ್ಟು ಬೇಗ ಸೀಟು ಹಂಚಿಕೆ ಮಾಡಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರ ಬಂಧನದ ಬಗ್ಗೆ ಕೇಜ್ರಿವಾಲ್ ಹೇಳಿದ್ದೇನು?: ಪಂಜಾಬ್‌ನಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ನಡುವಿನ ಉದ್ವಿಗ್ನತೆಯ ಬಗ್ಗೆ ಮಾತನಾಡಿದ ಕೇಜ್ರಿವಾಲ್, ಪಂಜಾಬ್ ಪೊಲೀಸರು ನಿನ್ನೆ ಕೆಲವು ಕಾಂಗ್ರೆಸ್ ಮುಖಂಡರನ್ನು ಬಂಧಿಸಿದ್ದಾರೆ. ಅದರ ವಿವರಗಳು ನನ್ನ ಬಳಿ ಇಲ್ಲ. ನಾವು ಡ್ರಗ್ಸ್ ವಿರುದ್ಧ ಸಮರ ಸಾರಿದ್ದೇವೆ. ಯಾವುದೇ ವೈಯಕ್ತಿಕ ಪ್ರಕರಣ ಅಥವಾ ವ್ಯಕ್ತಿಯ ಬಗ್ಗೆ ಪ್ರತಿಕ್ರಿಯಿಸಬೇಕಾಗಿಲ್ಲ, ಆದರೆ ನಾವು ಡ್ರಗ್ಸ್ ಅನ್ನು ಕೊನೆಗೊಳಿಸಲು ಬದ್ಧರಾಗಿದ್ದೇವೆ. ಅದರ ವಿರುದ್ಧದ ಹೋರಾಟದಲ್ಲಿ ಯಾರನ್ನೂ ಬಿಡುವುದಿಲ್ಲ. ಅವರು ದೊಡ್ಡರಾಗಿರಲಿ ಅಥವಾ ಸಣ್ಣ ವ್ಯಕ್ತಿಯಾಗಿರಲಿ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.