ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಎಲ್ಲಾ ರಂಗಗಳಲ್ಲಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಸಚಿವ ರಾಮದಾಸ್ ಅಠವಳೆ ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ತೊಡಕುಗಳಾಗಿದ್ದ ಆರ್ಟಿಕಲ್ 370 ಮತ್ತು 35 ಎ ವಿಧಿಗಳನ್ನು ಜನರ ಕಲ್ಯಾಣಕ್ಕಾಗಿ ಹಿಂಪಡೆಯಲಾಗಿದೆ ಎಂದು ಹೇಳಿದರು.
ಕೇಂದ್ರದ ಬಜೆಟ್ ಕುರಿತು ಮಾತನಾಡಿದ ಅವರು, ಇದೊಂದು ಆತ್ಮ ನಿರ್ಭರ ಭಾರತದ ಬಜೆಟ್ ಎಂದು ಹೇಳಿದರು. 2022-23 ರ ಹಣಕಾಸು ವರ್ಷಕ್ಕೆ ಹೋಲಿಕೆ ಮಾಡಿದರೆ, 2023-24 ರ ಆರ್ಥಿಕ ವರ್ಷದಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಶೇಕಡಾ 10.18 ರಷ್ಟು ಹೆಚ್ಚಿನ ಅನುದಾನ ನೀಡಲಾಗಿದೆ ಎಂದು ಹೇಳಿದರು.
ಮುಂದಿನ ಮೂರು ವರ್ಷಗಳಲ್ಲಿ, ಕೇಂದ್ರಾಡಳಿತ ಪ್ರದೇಶದ 740 ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ 38,880 ಶಿಕ್ಷಕರು ಮತ್ತು ಸಹಾಯಕ ಸಿಬ್ಬಂದಿಯನ್ನು ನೇಮಿಸಲಾಗುವುದು. 2023-24ರ ಹಣಕಾಸು ವರ್ಷದಲ್ಲಿ ರೈಲ್ವೆ ಅಭಿವೃದ್ಧಿಗೆ 2.4 ಲಕ್ಷ ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
"ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಮತ್ತು ಸಮೃದ್ಧಿ ನೆಲೆಸುವಂತೆ ಮಾಡುವುದು ಮತ್ತು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವುದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪ್ರಮುಖ ಆದ್ಯತೆಯಾಗಿದೆ. ಇದು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆ, ಜನ್ ಧನ್ ಯೋಜನೆ, ಮುದ್ರಾ ಯೋಜನೆ, ಪ್ರಧಾನ ಮಂತ್ರಿ ಉಜ್ವಲ ಯೋಜನೆ, ವಿದ್ಯಾರ್ಥಿವೇತನ ಯೋಜನೆಗಳಂತಹ ಹಲವು ಕೇಂದ್ರದ ಯೋಜನೆಗಳಿಂದ ನಮಗೆ ಗೊತ್ತಾಗುತ್ತದೆ ಎಂದರು.ಅಲ್ಲದೆ ವಿದ್ಯಾರ್ಥಿಗಳಿಗೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಮತ್ತು ಇತರ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.
ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ 2016- 2022ರ ನಡುವೆ ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು 12,45,000 ಗ್ಯಾಸ್ ಸಂಪರ್ಕಗಳನ್ನು ಫಲಾನುಭವಿಗಳಿಗೆ ನೀಡಲಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 2015-2023ರ ಅವಧಿಯಲ್ಲಿ ಒಟ್ಟು 20,700 ಮನೆಗಳನ್ನು ನಿರ್ಮಿಸಿ ಕೊಡಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ :ಲೋಕಸಭೆಯಿಂದ ಅನರ್ಹಗೊಂಡ ಬಳಿಕ ರಾಹುಲ್ ಗಾಂಧಿ ಮೊದಲ ಮಾಧ್ಯಮಗೋಷ್ಟಿ