ಜಮ್ಮು (ಶ್ರೀನಗರ): ಭಾರತ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿರುವ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಈ ಹಿಂದೆ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಗೆ ನ್ಯಾಯಾಲಯ ದಿನಾಂಕ ನಿಗದಿಪಡಿಸಿದೆ. ಅರ್ಜಿ ಸಲ್ಲಿಸಿದ್ದವರಲ್ಲಿ ಒಬ್ಬರಾಗಿರುವ ಐಎಎಸ್ ಅಧಿಕಾರಿ ಶಾ ಫೈಸಲ್ ಈ ಬಗ್ಗೆ ಟ್ವಿಟ್ಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ ಟ್ವಿಟ್ಟರ್ ಖಾತೆಯಲ್ಲಿ, 'ಆರ್ಟಿಕಲ್ 370 ಹಿಂದಿನ ವಿಷಯ' ಎಂದು ಹೇಳಿದ್ದಾರೆ. 'ಆರ್ಟಿಕಲ್ 370, ನನ್ನಂತಹ ಅನೇಕ ಕಾಶ್ಮೀರಿಗಳಿಗೆ ಹಳೇಯ ವಿಷಯವಾಗಿದೆ. ಜೀಲಂ ಮತ್ತು ಗಂಗಾ ನದಿಗಳು ಒಳ್ಳೆಯದಕ್ಕಾಗಿ ಹಿಂದೂ ಮಹಾಸಾಗರದಲ್ಲಿ ವಿಲೀನಗೊಳ್ಳುತ್ತವೆ. ಅವು ಮತ್ತೆ ಹಿಂದಿರುಗಲ್ಲ. ಮುಂದೆ ಮಾತ್ರ ಸಾಗುವುದು ಇದೆ” ಎಂದು ಫೈಸಲ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.
2010ರ ಬ್ಯಾಚ್‌ನ ಭಾರತೀಯ ಆಡಳಿತ ಸೇವೆಯ (IAS) ಅಧಿಕಾರಿ ಶಾ ಫೈಸಲ್, ಆರ್ಟಿಕಲ್ 370ರ ನಿಬಂಧನೆಗಳನ್ನು ಕೇಂದ್ರ ರದ್ದುಗೊಳಿಸಿದ ನಂತರ ಹಾಗೂ ಹಿಂದಿನ ಜಮ್ಮು ಮತ್ತು ಕಾಶ್ಮೀರ್ ರಾಜ್ಯವನ್ನು ಆಗಸ್ಟ್ 2019 ರಲ್ಲಿ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ನಂತರ ಒಂದು ವರ್ಷಕ್ಕೂ ಹೆಚ್ಚು ಕಾಲ ಅವರನ್ನು ಬಂಧಿಸಿಡಲಾಗಿತ್ತು.
ಬಳಿಕ ಫೈಸಲ್ ತಮ್ಮ ಸೇವೆಗೆ ರಾಜೀನಾಮೆ ನೀಡಿ, ಜನವರಿ 2019 ರಲ್ಲಿ ಜಮ್ಮು ಕಾಶ್ಮೀರ್ ಪೀಪಲ್ಸ್ ಮೂಮೆಂಟ್ ಪಕ್ಷವನ್ನು ಪ್ರಾರಂಭಿಸಿದರು. ಆದರೆ, ಸರ್ಕಾರ ಅವರ ರಾಜೀನಾಮೆಯನ್ನು ಅಂಗೀಕರಿಸಲಿಲ್ಲ. ನಂತರ ಅವರನ್ನು ಕೇಂದ್ರ ಸಂಸ್ಕೃತಿ ಸಚಿವಾಲಯಕ್ಕೆ ನೇಮಿಸಲಾಯಿತು.
370ನೇ ವಿಧಿ ರದ್ದುಗೊಳಿಸುವ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಫೈಸಲ್ ಅವರು 2019 ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರು. ಏಪ್ರಿಲ್ 2022 ರಲ್ಲಿ, ತಮ್ಮ ರಾಜೀನಾಮೆ ಹಿಂತೆಗೆದುಕೊಳ್ಳಲು ಸಲ್ಲಿಸಿದ್ದ ಅರ್ಜಿಯನ್ನು ಸರ್ಕಾರವು ಅಂಗೀಕರಿಸಿ ಅವರನ್ನು ಮರುನೇಮಕ ಮಾಡಿತು. ಅದೇ ತಿಂಗಳಲ್ಲಿ, ಫೈಸಲ್ ಅವರು 370 ನೇ ವಿಧಿಯ ರದ್ದತಿಯನ್ನು ಪ್ರಶ್ನಿಸಿದ ಏಳು ಅರ್ಜಿದಾರರ ಪಟ್ಟಿಯಿಂದ ತಮ್ಮ ಹೆಸರನ್ನು ಕೈಬಿಡುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ 370 ನೇ ವಿಧಿಯನ್ನು ಸರ್ಕಾರ ರದ್ದುಗೊಳಿಸಿದ ಸುಮಾರು ನಾಲ್ಕು ವರ್ಷಗಳ ನಂತರ, ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಜುಲೈ 11 ರಂದು ಅರ್ಜಿಗಳ ವಿಚಾರಣೆ ನಡೆಸಲಿದೆ. ಸೋಮವಾರ ಸುಪ್ರೀಂ ಕೋರ್ಟ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಸೂಚನೆಯ ಪ್ರಕಾರ, ಪೀಠವು ನಿರ್ದೇಶನಗಳನ್ನು ರವಾನಿಸುವ ಅರ್ಜಿಗಳನ್ನು ಆಲಿಸಲಿದೆ.
ಇದನ್ನೂ ಓದಿ:ಸಂವಿಧಾನದಲ್ಲಿ 370 ನೇ ವಿಧಿ ತಾತ್ಕಾಲಿಕ ನಿಬಂಧನೆಯಾಗಿದೆ: ಅಮಿತ್ ಶಾ