ಜಮ್ಮು: ಪಾಕಿಸ್ತಾನದ ಜೈಷ್ ಎ ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆಯು ಅಜಿತ್ ದೋವಲ್ ಕಚೇರಿ ಸೇರಿದಂತೆ ದೆಹಲಿಯಲ್ಲಿ ದಾಳಿ ನಡೆಸಲು ಸಂಚು ರೂಪಿಸಿತ್ತು ಎಂದು ಜಮ್ಮು-ಕಾಶ್ಮೀರ ಪೊಲೀಸ್ ಮಹಾ ನಿರ್ದೇಶಕ ದಿಲ್ಬಾಗ್ ಸಿಂಗ್ ಸ್ಫೋಟಕ ಮಾಹಿತಿ ನೀಡಿದ್ದಾರೆ.
ಡಿಜಿಪಿ ದಿಲ್ಬಾಗ್ ಸಿಂಗ್ ಹೇಳಿಕೆ ಮಾಧ್ಯಮದಗೋಷ್ಟಿಯಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ದಾಳಿ ನಡೆಸುವ ನೇತೃತ್ವ ವಹಿಸಿದ್ದ ಇಬ್ಬರು ಉಗ್ರರನ್ನು ಭದ್ರತಾ ಪಡೆ ಬಂಧಿಸಿದ್ದು, ದಾಳಿಯ ಸಂಚನ್ನು ವಿಫಲಗೊಳಿಸಿದ್ದೇವೆ. ಜಮ್ಮು ಕೇಂದ್ರ ಬಸ್ ನಿಲ್ದಾಣದಲ್ಲಿ 6.5 ಕೆ.ಜಿ ಬಾಂಬ್ ಸಹಿತ ಶಸ್ತ್ರಾಸ್ತ್ರಗಳನ್ನು ಭಾನುವಾರ ವಶಕ್ಕೆ ಪಡೆಯಲಾಗಿದೆ. ನಡೆಯಬಹುದಾಗಿದ್ದ ಭಾರಿ ಅನಾಹುತವನ್ನು ತಪ್ಪಿಸಿದ್ದೇವೆ ಎಂದು ಹೇಳಿದರು.
ಜೆಇಎಂನ ಭಾರತೀಯ ಘಟಕಗಳಾಗಿ ಲಷ್ಕರ್ ಎ ಮುಸ್ತಫಾ (ಎಲ್‌ಇಎಂ) ಮತ್ತು ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಕಾರ್ಯನಿರ್ವಹಿಸುತ್ತಿವೆ. ಈ ಎರಡೂ ಉಗ್ರ ಸಂಘಟನೆಗಳ ಮುಖ್ಯಸ್ಥರಾದ ಹಿದಾಯತ್ ಉಲ್ಲಾ ಮಲೀಕ್ ಮತ್ತು ಝಹೂರ್ ಅಹ್ಮದ್ ರಾಥೆರ್ ಎಂಬ ಉಗ್ರರನ್ನು ಕಳೆದ ಒಂದು ವಾರದಲ್ಲಿ ಬಂಧಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಈ ಕಾರ್ಯಾಚರಣೆಯ ಭಾಗವಾಗಿ ಲಭ್ಯವಾದ ನಿಖರ ಮಾಹಿತಿ ಮೇರೆಗೆ ಜಮ್ಮು ಬಸ್ ನಿಲ್ದಾಣದಲ್ಲಿ ಶೋಧಕಾರ್ಯ ನಡೆಸಲಾಗಿದ್ದು, 7 ಕೆ.ಜಿ ಕಚ್ಚಾಬಾಂಬ್ ಮತ್ತು ಹಲವು ಶಸ್ತ್ರಾಸ್ತ್ರ ಪತ್ತೆಯಾದವು. ಈ ಸಂಬಂಧ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ವಿದ್ಯಾರ್ಥಿಯೊಬ್ಬನನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.
ಭಾರತ ಮತ್ತು ಪಾಕಿಸ್ತಾನದ ನಡುವಣ ಅಂತಾರಾಷ್ಟ್ರೀಯ ಗಡಿಯಲ್ಲಿನ ರಹಸ್ಯ ಸುರಂಗಗಳ ಮೂಲಕ ಪಾಕಿಸ್ತಾನದಿಂದ ಶಸ್ತ್ರಾಸ್ತ್ರ ಕಳ್ಳಸಾಗಣೆ ಮಾಡಿದ್ದಾರೆ. ಅಲ್ಲದೆ, ಡ್ರೋನ್‌ಗಳ ಮೂಲಕವೂ ಶಸ್ತ್ರಾಸ್ತ್ರಗಳನ್ನು ಭಾರತಕ್ಕೆ ತರಿಸಿಕೊಂಡಿದ್ದಾರೆ. ಜಮ್ಮುವಿನಿಂದ ಅವನ್ನು ವಿದ್ಯಾರ್ಥಿಗಳ ಮೂಲಕ ಕಾಶ್ಮೀರಕ್ಕೆ ಸಾಗಿಸಿದ್ದಾರೆ ಎಂದು ದಿಲ್ಬಾಗ್ ಸಿಂಗ್ ತಿಳಿಸಿದರು.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ದೆಹಲಿಯಲ್ಲಿನ ಕಚೇರಿಯನ್ನು ಮಲಿಕ್ ವಿಡಿಯೋದಲ್ಲಿ ಸೆರೆ ಹಿಡಿದಿದ್ದ. ಅವರ ದಾಳಿಯ ಗುರಿಗಳಲ್ಲಿ ಈ ಕಚೇರಿ ಸಹ ಸೇರಿತ್ತು. ಈ ವಿಡಿಯೊವನ್ನು ಆತ ಜೆಇಎಂನ ಕಮಾಂಡರ್ ಆಶಿಶ್ ನೆಂಗ್ರೂಗೆ ಕಳುಹಿಸಿದ್ದ. ಆಶಿಶ್‌ನ ಆದೇಶದ ಮೇರೆಗೆ ಈ ಎಲ್ಲಾ ಕೆಲಸಗಳನ್ನು ಮಾಡಿದ್ದಾಗಿ ಬಂಧಿತರು ಒಪ್ಪಿಕೊಂಡಿದ್ದಾರೆ ಎಂದು ಡಿಜಿಪಿ ದಿಲ್ಬಾಗ್ ಸಿಂಗ್ ವಿವರಿಸಿದರು.