ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಶನಿವಾರ ಸಂಜೆ ಸೇನಾ ಯೋಧರೊಬ್ಬರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಕುಲ್ಗಾಮ್ ಜಿಲ್ಲೆಯ ಅಚಾತಲ್ ಗ್ರಾಮದ ನಿವಾಸಿ ಜಾವೇದ್ ಅಹ್ಮದ್ ವಾನಿ ಕಾಣೆಯಾದವರು ಎಂದು ತಿಳಿದುಬಂದಿದೆ.
ಲಡಾಖ್ ಪ್ರದೇಶದಲ್ಲಿ ನಿಯೋಜನೆಗೊಂಡಿದ್ದ ಜಾವೇದ್ ರಜೆಯಲ್ಲಿದ್ದರು. ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ನಾಪತ್ತೆಯಾಗಿದ್ದಾರೆ. ಅವರ ಕಾರು ನಿನ್ನೆ ಸಂಜೆ ಅದೇ ಜಿಲ್ಲೆಯ ಪಾರನಹಾಲ್ ಗ್ರಾಮದಲ್ಲಿ ಸಿಕ್ಕಿದೆ. ವರದಿಗಳ ಪ್ರಕಾರ, ಕಾರಿನಲ್ಲಿ ರಕ್ತದ ಕಲೆಗಳಿವೆ. ಘಟನೆಯ ಬಗ್ಗೆ ಪೊಲೀಸರು ಇನ್ನೂ ಖಚಿತಪಡಿಸಿಲ್ಲ. ಯೋಧನ ಪತ್ತೆಗೆ ಭಾರತೀಯ ಸೇನೆ ಮತ್ತು ಪೊಲೀಸರು ಭಾರಿ ಶೋಧ ಕಾರ್ಯ ಆರಂಭಿಸಿದ್ದಾರೆ ಎಂದು ಸೇನಾಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ:ಯೋಧ ನಾಪತ್ತೆ ಪ್ರಕರಣ ; ಅಪಹರಿಸಿ ಕೊಲೆ ಮಾಡಿರುವುದಾಗಿ ಆಡಿಯೋ ಸಂದೇಶ
ಜಾವೇದ್ ತನ್ನ ಕಾರಿನಲ್ಲಿ ದಿನಸಿ ವಸ್ತುಗಳನ್ನು ಖರೀದಿಸಲು ಚೋವಲ್ಗಾಮ್‌ಗೆ ಹೋಗಿದ್ದರು. ಆದರೆ ಅವರು ಮನೆಗೆ ಹಿಂತಿರುಗದಿದ್ದಾಗ, ಕುಟುಂಬ ಸದಸ್ಯರು ಹತ್ತಿರದ ಪ್ರದೇಶಗಳಲ್ಲಿ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅವರನ್ನು ಹುಡುಕಾಟ ಪ್ರಾರಂಭಿಸಿದ್ದಾರೆ. ಪತ್ತೆ ಕಾರ್ಯದ ವೇಳೆ ಪರನಹಾಲ್ ಗ್ರಾಮದಲ್ಲಿ ಕಾರು ಕಂಡುಬಂದಿದೆ. ಕಾರಿನಲ್ಲಿ ಚಪ್ಪಲಿ ಮತ್ತು ರಕ್ತದ ಕಲೆಗಳು ಕಂಡುಬಂದಿವೆ. ವಾಹನವನ್ನು ಅನ್‌ಲಾಕ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.