ಶ್ರೀನಗರ (ಜಮ್ಮು ಮತ್ತು ಕಾಶ್ಮೀರ):ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನ ಸಿಯಾಚಿನ್‌ನಲ್ಲಿ ಬುಧವಾರ ಭಾರಿ ದುರಂತ ಸಂಭವಿಸಿದೆ. ಭಾರತೀಯ ಸೇನೆಯ ಮದ್ದು ಗುಂಡುಗಳ ಬಂಕರ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾದ ಪರಿಣಾಮ ಹಲವಾರು ಟೆಂಟ್ಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ದುರ್ಘಟನೆಯಲ್ಲಿ ಸೇನಾಧಿಕಾರಿಯೊಬ್ಬರು ಸಾವನ್ನಪ್ಪಿದ್ದು, ಇತರ ಆರು ಸೈನಿಕರು ಗಾಯಗೊಂಡಿದ್ದಾರೆ.
ಸಿಯಾಚಿನ್ ಹಿಮನದಿಯಲ್ಲಿ ಇಂದು ಬೆಳಗಿನ 3.30ರ ಸುಮಾರಿಗೆ ಭಾರತೀಯ ಸೇನೆಯ ಹಲವಾರು ಟೆಂಟ್ಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮದ್ದುಗುಂಡುಗಳ ಬಂಕರ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಈ ಟೆಂಟ್ಗಳಲ್ಲಿ ಹೊತ್ತಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ದುರದೃಷ್ಟಕರ ಘಟನೆಯಲ್ಲಿ ರೆಜಿಮೆಂಟ್ ಮೆಡಿಕಲ್ ಆಫೀಸರ್ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಎಂಬುವವರು ಗಂಭೀರ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದಾರೆ. ಜೊತೆಗೆ ಆರು ಯೋಧರು ಗಾಯಗೊಂಡಿದ್ದಾರೆ. ಈ ಪೈಕಿ ಮೂವರನ್ನು ಚಿಕಿತ್ಸೆಗಾಗಿ ಚಂಡೀಗಢಕ್ಕೆ ರವಾನಿಸಲಾಗಿದೆ ಎಂಬ ಸೇನಾ ಮೂಲಗಳು ತಿಳಿಸಿವೆ.
ಈ ಘಟನೆಯ ಬಗ್ಗೆ ಮಾಹಿತಿ ನೀಡಿರುವ ರಕ್ಷಣಾ ಪಿಆರ್‌ಒ, ಲೇಹ್ ಲೆಫ್ಟಿನೆಂಟ್ ಕರ್ನಲ್ ಪಿಎಸ್ ಸಿಧು, ಇಂದು ಸಿಯಾಚಿನ್ ಹಿಮನದಿಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಓರ್ವ ಅಧಿಕಾರಿ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೇ, ಆರು ಯೋಧರು ಗಾಯಗೊಂಡಿದ್ದಾರೆ. ಇದರಲ್ಲಿ ಮೂವರು ಸೈನಿಕರನ್ನು ಅಲ್ಲಿಂದ ಸುರಕ್ಷಿತವಾಗಿ ಚಂಡೀಗಢದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ. ರೆಜಿಮೆಂಟ್ ಮೆಡಿಕಲ್ ಆಫೀಸರ್ ಆಗಿದ್ದ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರು ಸುಟ್ಟ ಗಾಯಗಳಿಂದ ಗಂಭೀರ ಸ್ಥಿತಿಗೆ ತಲುಪಿದ್ದರು. ಮೂವರು ಗಾಯಾಳು ಸಿಬ್ಬಂದಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.