ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಕಳೆದ ಆರು ದಿನಗಳಿಂದ ಅನಂತ್ನಾಗ್ ಜಿಲ್ಲೆಯ ಕೋಕರ್ನಾಗ್ ಪ್ರದೇಶದಲ್ಲಿ ಭಾರತೀಯ ಸೇನೆ ಹಾಗೂ ಭಯೋತ್ಪಾದಕರ ನಡುವೆ ನಡೆಯುತ್ತಿರುವ ಎನ್ಕೌಂಟರ್ನಲ್ಲಿ ಸೆಪ್ಟೆಂಬರ್ 13ರಂದು ನಾಪತ್ತೆಯಾಗಿದ್ದ ಪ್ರದೀಪ್ ಸಿಂಗ್ (27) ಎಂಬ ಯೋಧ ಸೋಮವಾರ ಶವವಾಗಿ ಪತ್ತೆಯಾಗಿದ್ದಾರೆ. ಇವರು ಉಗ್ರ ದಮನ ಜಂಟಿ ಕಾರ್ಯಾಚರಣೆಯ ಭಾಗವಾಗಿದ್ದರು. ಸೋಮವಾರ ಸಂಜೆ 5 ಗಂಟೆಗೆ ಮೃತದೇಹ ದೊರೆತಿದೆ.
ಶಸ್ತ್ರಸಜ್ಜಿತ ಭಯೋತ್ಪಾದಕನಿಂದ ದಾಳಿ: ಶಸ್ತ್ರಸಜ್ಜಿತ ಭಯೋತ್ಪಾದಕನೊಬ್ಬ ಶ್ರೀನಗರ ಜಿಲ್ಲೆಯ ಖನ್ಯಾರ್ ಪ್ರದೇಶದಲ್ಲಿ ಸಿಆರ್ಪಿಎಫ್ನ ಬುಲೆಟ್ ಪ್ರೂಫ್ ವಾಹನವೊಂದರ ಮೇಲೆ ದಾಳಿ ನಡೆಸಿದ್ದಾನೆ. ತಕ್ಷಣ ಎಚ್ಚೆತ್ತ ಭದ್ರತಾ ಸಿಬ್ಬಂದಿ ದಾಳಿಯನ್ನು ಹಿಮ್ಮೆಟ್ಟಿಸಿದರು ಎಂದು ಶ್ರೀನಗರ ಪೊಲೀಸರು ಮಾಹಿತಿ ನೀಡಿದ್ದಾರೆ.
ಶ್ರೀನಗರ ಪೊಲೀಸರು ಅಧಿಕೃತ ಎಕ್ಸ್ ಖಾತೆಯಲ್ಲಿ (ಹಿಂದಿನ ಟ್ವಿಟರ್) ಈ ಕುರಿತು ಪೋಸ್ಟ್ ಹಂಚಿಕೊಂಡಿದ್ದಾರೆ. ಘಟನೆಯಲ್ಲಿ ಯಾವುದೇ ಗಾಯ ಅಥವಾ ಪ್ರಾಣಹಾನಿ ವರದಿಯಾಗಿಲ್ಲ. ಸಿಆರ್ಪಿಎಫ್ ವಾಹನದ ಮೇಲೆ ಗುಂಡು ಹಾರಿಸಿದ ಬಳಿಕ ಭಯೋತ್ಪಾದಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದಾರೆ.
7ನೇ ದಿನವೂ ಮುಂದುವರಿದ ಕಾರ್ಯಾಚರಣೆ: ಸೆಪ್ಟೆಂಬರ್ 13 ರಂದು ಸಂಜೆ ಭಾರತೀಯ ಸೇನೆ, ಪೊಲೀಸ್ ಪಡೆ, ಅರೆಸೇನಾ ಪಡೆ ಹಾಗೂ ಸಿಆರ್ಪಿಎಫ್ ಜಂಟಿಯಾಗಿ ಭಯೋತ್ಪಾದನಾ ವಿರೋಧಿ ಮಿಲಿಟರಿ ಕಾರ್ಯಾಚರಣೆ ಪ್ರಾರಂಭಿಸಿದ್ದರು. ಅನಂತ್ನಾಗ್ ಜಿಲ್ಲೆಯ ಕೋಕರ್ನಾಗ್ ಹಾಗೂ ಗಡೂಲ್ ಗುಡ್ಡಕಾಡು ಪ್ರದೇಶಗಳಲ್ಲಿ ಎರಡರಿಂದ ಮೂವರು ಉಗ್ರರು ಅಡಗಿಕೊಂಡಿದ್ದಾರೆ ಎನ್ನುವ ಮಾಹಿತಿ ಆಧಾರದಲ್ಲಿ ಭದ್ರತಾ ಪಡೆ ಎನ್ಕೌಂಟರ್ ಪ್ರಾರಂಭಿಸಿತ್ತು.
ಭಯೋತ್ಪಾದಕರು ಹಾಗೂ ಭದ್ರತಾ ಪಡೆಯ ನಡುವಿನ ಎನ್ಕೌಂಟರ್ನಲ್ಲಿ ಕರ್ನಲ್ ಮನ್ಪ್ರೀತ್ ಸಿಂಗ್, 19 ರಾಷ್ಟ್ರೀಯ ರೈಫಲ್ಸ್ನ ಮೇಜರ್ ಆಶಿಶ್ ಧೋಂಚಕ್ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆಯ ಡಿಎಸ್ಪಿ ಹುಮಾಯೂನ್ ಭಟ್ ಹುತಾತ್ಮರಾಗಿದ್ದರು. ಮೊದಲ ದಿನ ಎನ್ಕೌಂಟರ್ನಲ್ಲಿ ನಾಪತ್ತೆಯಾಗಿದ್ದ ಒಬ್ಬ ಯೋಧ ನಿನ್ನೆ ಶವವಾಗಿ ಪತ್ತೆಯಾಗಿದ್ದಾರೆ. ಭಯೋತ್ಪಾದಕರು ಅಡಗಿರುವ ಕಾಡನ್ನು ಭದ್ರತಾ ಪಡೆ ಸುತ್ತುವರೆದಿದ್ದು, ವ್ಯಾಪಕ ಬಂದೋವಸ್ತ್ ಮಾಡಲಾಗಿದೆ. ಕಳೆದ ಆರು ದಿನಗಳಿಂದ ನಡೆಯುತ್ತಿರುವ ಎನ್ಕೌಂಟರ್ನಲ್ಲಿ ಇಂದೂ ಮುಂದುವರಿದಿದ್ದು, ಉಗ್ರರಿಂದ ಯಾವುದೇ ಗುಂಡಿನ ದಾಳಿ ನಡೆಯುತ್ತಿಲ್ಲವಾದ್ದರಿಂದ ಕಾರ್ಯಾಚರಣೆ ವಿಳಂಬವಾಗುತ್ತಿದೆ.
ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ಪಟ್ಟಣದ ಹತ್ಲಂಗಾ ಫಾರ್ವರ್ಡ್ ಪ್ರದೇಶದಲ್ಲಿಯೂ ಭದ್ರತಾ ಪಡೆಗಳು ಹಾಗೂ ಭಯೋತ್ಪಾದಕರ ನಡುವೆ ಮೂರು ದಿನಗಳ ಹಿಂದೆ ಎನ್ಕೌಂಟರ್ ನಡೆದಿದ್ದು, ಈ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿತ್ತು. ಉರಿ ಸೆಕ್ಟರ್ನ ಗಡಿ ನಿಯಂತ್ರಣ ರೇಖೆ ಬಳಿ ಒಳನುಸುಳಲು ಪ್ರಯತ್ನಿಸುತ್ತಿದ್ದ ಮೂವರನ್ನು ಭದ್ರತಾ ಪಡೆ ಹೊಡೆದುರುಳಿಸಿತ್ತು.
ಇದನ್ನೂ ಓದಿ:ಅನಂತ್ನಾಗ್ ಜಿಲ್ಲೆಯಲ್ಲಿ 6 ದಿನವಾದರೂ ಮುಗಿಯದ ಉಗ್ರ ದಮನ ಕಾರ್ಯಾಚರಣೆ: ಈ ಕಾರಣಗಳಿಗಾಗಿ ವಿಳಂಬ..