ನವದೆಹಲಿ: ತಿಹಾರ್ ಜೈಲಿನೊಳಗಿಂದ 200 ಕೋಟಿ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಜೈಲು ಅಧಿಕಾರಿಯನ್ನು ಆರ್ಥಿಕ ಅಪರಾಧಗಳ ವಿಭಾಗ ಬಂಧಿಸಿದೆ. ಆರೋಪಿಯನ್ನು ಸಹಾಯಕ ಅಧೀಕ್ಷಕ ಪ್ರಕಾಶ್ ಚಂದ್ ಎಂದು ಗುರುತಿಸಲಾಗಿದ್ದು, ಇದೀಗ ಆ ಆರೋಪಿಯನ್ನು ತಿಹಾರ್ ಜೈಲಿಗೆ ಕಳುಹಿಸಲಾಗಿದೆ.
2017ರಲ್ಲಿ ಚುನಾವಣಾ ಆಯೋಗದ ಹೆಸರಿನಲ್ಲಿ ಭಾರಿ ಮೊತ್ತದ ವಂಚನೆ ಪ್ರಕರಣದಲ್ಲಿ ಸುಕೇಶ್ ಚಂದ್ರಶೇಖರ್ ಅನ್ನು ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದರು. ಆರೋಪಿ ಸುಕೇಶ್ನನ್ನು ಮೊದಲು ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು. ಬಳಿಕ ರೋಹಿಣಿ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಆರೋಪಿ ಜೈಲಿನಲ್ಲಿದ್ದ ಸಮಯದಲ್ಲಿ ಜೈಲು ಅಧಿಕಾರಿಗಳು ಸುಕೇಶ್ಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತಿದ್ದರು ಎಂಬ ಆರೋಪ ಕೇಳಿ ಬಂದಿತ್ತು.
ಓದಿ:ತಿಹಾರ್ ಜೈಲು ಸಿಬ್ಬಂದಿಗೆ ಲಂಚ ನೀಡಿದ ವಂಚಕ ಸುಕೇಶ್.. ಬೇರೊಂದು ಜೈಲಿಗೆ ಶಿಫ್ಟ್
ಸುಕೇಶ್ ಜೈಲಿನಿಂದಲೇ ಉದ್ಯಮಿ ಶಿವೇಂದ್ರ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ಗೆ 200 ಕೋಟಿ ರೂಪಾಯಿ ವಂಚನೆ ಮಾಡಿದ್ದರು. ಈ ಪ್ರಕರಣ ಬೆಳಕಿಗೆ ಬಂದ ನಂತರ ಸುಕೇಶ್ನನ್ನು ಮತ್ತೆ ಬಂಧಿಸಲಾಗಿತ್ತು. ಈ ವಂಚನೆಗೆ ಸಹಾಯ ಮಾಡಿದ್ದ 7 ಜೈಲು ಅಧಿಕಾರಿಗಳನ್ನು ಈ ಮೊದಲೇ ಆರ್ಥಿಕ ಅಪರಾಧಗಳ ವಿಭಾಗ ಬಂಧಿಸಿತ್ತು.
ಈಗ ಮತ್ತೊಬ್ಬ ಅಧಿಕಾರಿಯನ್ನು ಬಂಧಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರದ ಅಡಿಯಲ್ಲಿ 80ಕ್ಕೂ ಹೆಚ್ಚು ಮಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ತಿಹಾರ್ ಜೈಲು ಆಡಳಿತಕ್ಕೆ ಇಒಡಬ್ಲ್ಯೂ ಈ ಹಿಂದೆ ಪತ್ರ ಬರೆದಿತ್ತು. ಸುಕೇಶ್ ರೋಹಿಣಿ ಜೈಲಿನಲ್ಲಿರುವಾಗ ಜೈಲು ಅಧಿಕಾರಿಗಳು ಆರೋಪಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತಿದ್ದರು ಎಂದು ಆರ್ಥಿಕ ಅಪರಾಧ ವಿಭಾಗದ ತನಿಖೆಯ ವೇಳೆ ತಿಳಿದು ಬಂದಿದೆ.
ಆರೋಪಿ ಸುಕೇಶ್ ಬೆಲೆಬಾಳುವ ಮೊಬೈಲ್ ಅನ್ನು ಜೈಲಿನಲ್ಲಿಯೂ ಬಳಸುತ್ತಿದ್ದ. ಇದಕ್ಕಾಗಿ 15 ದಿನಕ್ಕೊಮ್ಮೆ ಜೈಲು ಅಧಿಕಾರಿಗಳಿಗೆ 65 ಲಕ್ಷ ಲಂಚ ನೀಡುತ್ತಿದ್ದ. ಈ ಪ್ರಕರಣದಲ್ಲಿ ತನಿಖೆ ನಡೆಸುತ್ತಿದ್ದಾಗ ಸಹಾಯಕ ಅಧೀಕ್ಷಕ ಪ್ರಕಾಶ್ ಚಂದ್ ಹೆಸರು ಪೊಲೀಸರ ಮುಂದೆ ಬಂದಿದೆ.
ಓದಿ:ಜಾಕ್ವೆಲಿನ್ಗಾಗಿ 500 ಕೋಟಿ ರೂ. ಬಜೆಟ್ ಸಿನಿಮಾ ಮಾಡಲು ಹೊರಟಿದ್ದ ವಂಚಕ ಸುಖೇಶ್..
ಪೊಲೀಸರ ವಿಚಾರಣೆಯ ನಂತರ ಪ್ರಕಾಶ್ ಚಂದ್ನನ್ನು ಬಂಧಿಸಿ ತಿಹಾರ್ ಜೈಲು ಆಡಳಿತಕ್ಕೆ ಮಾಹಿತಿ ನೀಡಲಾಯಿತು. ತಿಹಾರ್ ಜೈಲು ಆಡಳಿತ ಅಧಿಕಾರಿಯನ್ನು ಅಮಾನತುಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ. ರೋಹಿಣಿ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ಗೆ ಸಕಲ ಸೌಲಭ್ಯ ಕಲ್ಪಿಸುವಲ್ಲಿ ಪ್ರಕಾಶ್ ಚಂದ್ ಅವರ ಕೈವಾಡವಿದೆ ಎಂಬುದು ತನಿಖೆ ಮೂಲಕ ತಿಳಿದು ಬಂದಿದೆ. ಈ ಸಂಬಂಧ ಪ್ರಕಾಶ್ ಚಂದ್ ವಿಚಾರಣೆ ನಡೆಯುತ್ತಿದೆ.