ಅಲಿರಾಜಪುರ (ಮಧ್ಯಪ್ರದೇಶ):ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ಸಾವನ್ನಪ್ಪಿದ್ದು, ಇದರಿಂದ ರೊಚ್ಚಿಗೆದ್ದು ಸ್ಥಳೀಯರು ಚಾಲಕನನ್ನು ಅದೇ ವಾಹನದಲ್ಲಿ ಜೀವಂತವಾಗಿ ಸುಟ್ಟು ಹಾಕಿರುವ ಘಟನೆ ಮಧ್ಯಪ್ರದೇಶದ ಅಲಿರಾಜಪುರ ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ಛೋಟಿಪೋಲ್ ಗ್ರಾಮದಲ್ಲಿ ಶುಕ್ರವಾರ ರಾತ್ರಿ 7 ಗಂಟೆ ಸುಮಾರಿಗೆ ಪಿಕಪ್ ವಾಹನವು ಡಿಕ್ಕಿ ಹೊಡೆದು 5 ವರ್ಷದ ಕಂಜಿ ಎಂಬ ಬಾಲಕಿ ಮೃತಪಟ್ಟಿದ್ದಳು. ಈ ಘಟನೆಯಿಂದ ಸ್ಥಳದಲ್ಲಿದ್ದ ಗ್ರಾಮಸ್ಥರು ಚಾಲಕನಿಗೆ ಥಳಿಸಿ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ. ಇದರಿಂದ ಚಾಲಕ ತೀವ್ರವಾಗಿ ಸುಟ್ಟು ಹೋಗಿದ್ದು, ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿ ಪೊಲೀಸರು ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ.