ಗಾಂಧಿನಗರ (ಗುಜರಾತ್): ಕರ್ನಾಟಕದಲ್ಲಿ ಗುಜರಾತ್ನ ಅಮುಲ್ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ನೀಡಬಾರದು ಎಂದು ಹಲವು ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ಮಾಡಿದರೆ, ಸಾಮಾಜಿಕ ಜಾಲತಾಣಗಳಲ್ಲಿ ಬಹಿಷ್ಕಾರದ ಅಭಿಯಾನಗಳು ನಡೆಯುತ್ತಿವೆ. ವಿಧಾನಸಭಾ ಚುನಾವಣೆ ಹತ್ತಿರವಿರುವುದರಿಂದ ಈ ಬಹಿಷ್ಕಾರದ ಕಾವು ಇನ್ನಷ್ಟು ಬಿಸಿಯಾಗಿದೆ. ಇದರ ಮಧ್ಯೆಯೇ ಗುಜರಾತ್ ಸಹಕಾರಿ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಜಯನ್ ಮೆಹ್ತಾ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಅಮುಲ್ ಹಾಗೂ ನಂದಿನಿ ನಡುವೆ ಉತ್ತಮ ಸಂಬಂಧ ಇದೆ, ಅದು ಮುಂದುವರಿಯುತ್ತದೆ. ಅಮುಲ್ ಹಾಗೂ ನಂದಿನಿ ನಡುವೆ ಸ್ಪರ್ಧೆಯ ಪ್ರಶ್ನೆಯೇ ಇಲ್ಲ. ನಮ್ಮ ಅಮುಲ್ ಕರ್ನಾಟಕ ರಾಜ್ಯವನ್ನು ಪ್ರವೇಶಿಸಿರುವುದು ಅಲ್ಲಿನ ನಂದಿನಿ ಬ್ರ್ಯಾಂಡ್ ಜೊತೆ ಸ್ಪರ್ಧಿಸಲು ಅಲ್ಲ. ಸ್ಥಳೀಯ ನಂದಿನಿ ಬ್ರ್ಯಾಂಡ್ನೊಂದಿಗೆ ಸೇರಿ, ಒಂದೇ ವೇದಿಕೆಯ ಮೂಲಕ ನಮ್ಮ ಉತ್ಪನ್ನಗಳನ್ನು ನಮ್ಮ ಗ್ರಾಹಕರಿಗೆ ಲಭ್ಯವಾಗುವಂತೆ ಮಾಡಲು ಇದು ನಮ್ಮ ಸಣ್ಣ ಪ್ರಯತ್ನವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಅಮುಲ್ ಉತ್ಪನ್ನಗಳನ್ನು ಬಹಿಷ್ಕರಿಸಿ ಕರ್ನಾಟಕದ ಹೈನುಗಾರರನ್ನು ಬೆಂಬಲಿಸಲು 'ರಾಜ್ಯದ ಹೆಮ್ಮೆ' ನಂದಿನಿಯನ್ನು ಬಳಸಿಕೊಳ್ಳುವಂತೆ ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಎಲ್ಲಾ ಹೋಟೆಲ್ ಮಾಲೀಕರಿಗೆ ಕರೆ ನೀಡಿದೆ. ಬಹಿಷ್ಕಾರದ ಕರೆಯೊಂದಿಗೆ, ಈ ವಿಷಯದ ಬಗ್ಗೆ ರಾಜಕೀಯ ಚರ್ಚೆಯೂ ತೀವ್ರಗೊಂಡಿದೆ ಮತ್ತು ಪ್ರತಿಪಕ್ಷ ನಾಯಕರು ಕರ್ನಾಟಕ ಸರ್ಕಾರವು ‘ರಾಜ್ಯದ ಹೆಮ್ಮೆ’, ನಂದಿನಿ ಬ್ರಾಂಡ್ ಅನ್ನು ನಾಶಪಡಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು 'ಈಟಿವಿ ಭಾರತ'ದ ಜೊತೆ ಮಾತನಾಡಿದ ಜಯನ್ ಮೆಹ್ತಾ, 'BoycottAmul' ಮತ್ತು 'GobackAmul' ನಂತಹ ಟೀಕೆಗಳು ಮತ್ತು ಘೋಷಣೆಗಳಿಗೆ ಪ್ರತಿಕ್ರಿಯಿಸಿ, "ಇದು ಅಮುಲ್ ವರ್ಸಸ್ ನಂದಿನಿಯ ವಿಚಾರ ಅಲ್ಲ, ಅದು ಅಮುಲ್ ಮತ್ತು ನಂದಿನಿ ಬಗ್ಗೆ. ಇವೆರಡೂ ಒಂದೇ ರೀತಿಯ ಹಿತಾಸಕ್ತಿಗಳ ಮೇಲೆ ಕೆಲಸ ಮಾಡುವ ರೈತ ಒಡೆತನದ ಸಹಕಾರಿಗಳಾಗಿವೆ. ನಾವಿಲ್ಲಿ ನಂದಿನಿಯೊಂದಿಗೆ ಸ್ಪರ್ಧಿಸಲು ಬಂದಿಲ್ಲ. ನಮ್ಮ ದಾರಿಯಲ್ಲಿ ಬರುವ ಪ್ರತಿಕ್ರಿಯೆಗಳಿಗೆ ನಾವು ಕಾಮೆಂಟ್ ಮಾಡಲು ಅಥವಾ ಟೀಕಿಸಲು ಸಾಧ್ಯವಿಲ್ಲ."