ನವದೆಹಲಿ:ಮಣಿಪುರದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ಹತೋಟಿಗೆ ತರಲು ರಕ್ಷಣಾ ಪಡೆಗಳು ಹರಸಾಹಸ ಪಡುತ್ತಿವೆ. ಈ ನಡುವೆ ಅಲ್ಲಿನ ಹಿಂಸಾಚಾರ ಕೊನೆಗೊಳಿಸಲು ಕೇಂದ್ರ ಸರ್ಕಾರ ನಿರಂತರ ಪ್ರಯತ್ನ ಮುಂದುವರೆಸಿದೆ. ಮಣಿಪುರದ ಪರಿಸ್ಥಿತಿಯನ್ನು ಚರ್ಚಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ರಾಷ್ಟ್ರರಾಜಧಾನಿಯಲ್ಲಿ ಸರ್ವಪಕ್ಷಗಳ ಸಭೆ ನಡೆಸಲಿದ್ದಾರೆ. ಇಂದು ಮಧ್ಯಾಹ್ನ 3 ಗಂಟಗೆ ಸಭೆ ಆರಂಭವಾಗಲಿದೆ.
ಮೇ 3 ರಿಂದ ಮಣಿಪುರದಲ್ಲಿ ಹಿಂಸಾಚಾರ ಘಟನೆಗಳು ನಡೆಯುತ್ತಿರುವುದರಿಂದ, ಶಾಂತಿ ಭಂಗ ತಡೆಯುವ ಪ್ರಯತ್ನದಲ್ಲಿ ರಾಜ್ಯ ಸರ್ಕಾರ ನಿರತವಾಗಿದೆ. ಸತತವಾಗಿ ನಡೆಯುತ್ತಿರುವ ವಿದ್ವಂಸಕ ಕೃತ್ಯಗಳನ್ನು ತಡೆಯುವ ಉದ್ದೇಶದಿಂದ ತಕ್ಷಣವೇ ಜಾರಿಗೆ ಬರುವಂತೆ ಜೂನ್ 25 ರವರೆಗೆ ಇಂಟರ್ನೆಟ್ ಮೇಲಿನ ನಿಷೇಧವನ್ನು ಇನ್ನೂ ಐದು ದಿನಗಳವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮೇ 3 ರಂದು ಮಣಿಪುರದಲ್ಲಿ ಬುಡಕಟ್ಟು ವಿದ್ಯಾರ್ಥಿಗಳ ಒಕ್ಕೂಟ ಎಟಿಎಸ್‌ಯು, ಮೇಟಿ ಸಮುದಾಯವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸುವ ಬೇಡಿಕೆಯನ್ನಿಟ್ಟು ಪ್ರತಿಭಟನೆ ನಡೆಸಿತ್ತು. ಈ ವೇಳೆ ಘರ್ಷಣೆಗಳು ಸಂಭವಿಸಿದ ಬಳಿಕ, ರಾಜ್ಯಾದ್ಯಂತ ಹಿಂಸಾಚಾರ ವ್ಯಾಪಿಸಿಕೊಂಡಿತ್ತು.
ಹಿಂಸಾಚಾರ ಕುರಿತು ಸೋನಿಯಾ ಕಳವಳ:ರಾಜ್ಯದಲ್ಲಿ ಶಾಂತಿ ಮತ್ತು ಸೌಹಾರ್ದತೆಗಾಗಿ ಪದೇ ಪದೇ ಮನವಿ ಮಾಡಿದ ಮೇಲೂ ಮಣಿಪುರದಲ್ಲಿ ಹಿಂಸಾಚಾರ ನಿಲ್ಲದೇ ಇರುವುದಕ್ಕೆ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಕಳವಳ ವ್ಯಕ್ತಪಡಿಸಿದ್ದಾರೆ. ಮಣಿಪುರದಲ್ಲಿ ನಡೆಯುತ್ತಿರುವ ಘಟನೆಗಳು "ನಮ್ಮ ರಾಷ್ಟ್ರದ ಆತ್ಮಸಾಕ್ಷಿಗೆ ಆಳವಾದ ಗಾಯವನ್ನು ಉಂಟುಮಾಡಿದೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮೋದಿ ನಡೆ ಬಗ್ಗೆ ರಾಹುಲ್ ಗರಂ:ಜನಾಂಗೀಯ ಹಿಂಸಾಚಾರ ಮತ್ತು ಘರ್ಷಣೆಯ ಹಿನ್ನೆಲೆಯಲ್ಲಿ ಮಣಿಪುರದಲ್ಲಿನ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸರ್ವ ಪಕ್ಷದ ಸಭೆ ಕರೆದಿದ್ದಾರೆ. ಈ ಸಭೆ ಕರೆದಿರುವುದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ದೇಶದಲ್ಲಿ ಇಲ್ಲದ ಸಮಯದಲ್ಲಿ ಸಭೆ ಕರೆದಿರುವುದಕ್ಕೆ ರಾಹುಲ್ ಗರಂ ಆಗಿದ್ದಾರೆ. ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸದಲ್ಲಿದ್ದು, ಈ ಸಭೆಯು ಅವರಿಗೆ ಮುಖ್ಯವಲ್ಲ ಎಂಬಂತೆ ತೋರಿಸುತ್ತದೆ ಎಂದು ರಾಹುಲ್ ಟೀಕಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, "ಮಣಿಪುರ 50 ದಿನಗಳಿಂದ ಹೊತ್ತಿ ಉರಿಯುತ್ತಿದೆ, ಆದರೆ ಪ್ರಧಾನಿ ಮೌನವಾಗಿದ್ದಾರೆ. ಸರ್ವಪಕ್ಷ ಸಭೆ ಪ್ರಧಾನಿ ದೇಶದಲ್ಲಿ ಇಲ್ಲದಿದ್ದಾಗ ಕರೆಯಲಾಗಿದೆ. ಇದು ಸ್ಪಷ್ಟವಾಗಿ ಈ ಸಭೆ ಪ್ರಧಾನಿಗೆ ಮುಖ್ಯವಲ್ಲ ಎಂಬುದನ್ನು ತೋರಿಸುತ್ತದೆ" ಎಂದು ರಾಹುಲ್ ಟೀಕಿಸಿದ್ದಾರೆ.
ಇದೇ ವೇಳೆ, ಸರ್ವಪಕ್ಷ ಸಭೆ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ನಾಯಕ ಕೆಸಿ ವೇಣುಗೋಪಾಲ್, ಮಣಿಪುರ ಪರಿಸ್ಥಿತಿಯ ಬಗ್ಗೆ ಪ್ರಧಾನಿ ಮೋದಿ ಅವರು ಮೌನ ವಹಿಸಿರುವ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದರು. "ಕಳೆದ 53 ದಿನಗಳಿಂದ ಮಣಿಪುರ ಹೊತ್ತಿ ಉರಿಯುತ್ತಿದೆ. ಪ್ರಧಾನಿ ಮೋದಿ ಇನ್ನೂ ಒಂದು ಮಾತನ್ನೂ ಆಡಿಲ್ಲ. ಮಣಿಪುರದ ನಿಯೋಗ ಕಳೆದ 10 ದಿನಗಳಿಂದ ನವದೆಹಲಿಯಲ್ಲೇ ಇದೆ. ಆದರೆ ಪ್ರಧಾನಿ ಅವರನ್ನು ಭೇಟಿ ಮಾಡಲು ಸಿದ್ಧರಿರಲಿಲ್ಲ" ಎಂದು ವೇಣುಗೋಪಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ನಿಮ್ಮ ಭವಿಷ್ಯ ಬಂದೂಕು, ಕಲ್ಲುಗಳಲ್ಲಿಲ್ಲ, ಲ್ಯಾಪ್‌ಟಾಪ್‌ಗಳಲ್ಲಿದೆ: ಕಾಶ್ಮೀರದ ಯುವಜನತೆಗೆ ಅಮಿತ್ ಶಾ ಕಿವಿಮಾತು