ಪ್ರದ್ಯೋತ್ ಮಾಣಿಕ್ಯ ದೆಬ್ಬರ್ಮಾ ಅವರ ತಿಪ್ರಾಹ ಸ್ಥಳೀಯ ಪ್ರಗತಿಪರ ಪ್ರಾದೇಶಿಕ ಒಕ್ಕೂಟ (Tipraha Indigenous Progressive Regional Alliance) ಪಕ್ಷದೊಂದಿಗೆ ಮೈತ್ರಿ ಒಪ್ಪಂದ ಮಾಡಿಕೊಳ್ಳಲು ಕಾಂಗ್ರೆಸ್ ನಾಯಕರ ಈಗಾಗಲೇ ತ್ರಿಪುರಾಕ್ಕೆ ಆಗಮಿಸಿದ್ದಾರೆ. ತಿಪ್ರಾಹ ಸ್ಥಳೀಯ ಪ್ರಗತಿಪರ ಪ್ರಾದೇಶಿಕ ಒಕ್ಕೂಟ ಇದನ್ನು ತಿಪ್ರಾ ಮೋಥಾ ಪಾರ್ಟಿ ಎಂದೂ ಕರೆಯಲಾಗುತ್ತದೆ. ಸದ್ಯದ ಚುನಾವಣಾ ಮತ ಎಣಿಕೆ ಟ್ರೆಂಡ್ಗಳನ್ನು ನೋಡಿದರೆ ತ್ರಿಪುರಾದ ಕೊನೆಯ ಮಹಾರಾಜನಾಗಿದ್ದ ಪ್ರದ್ಯೋತ್ ಅವರ ಪಕ್ಷವು ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಗಳು ಗೋಚರಿಸಿವೆ. ಪ್ರದ್ಯೋತ್ ಇವರು ಮಾಜಿ ಪತ್ರಕರ್ತರೂ ಹೌದು. ಅಲ್ಲದೇ ಇವರು ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದರು.
ತಿಪ್ರಾ ಮೋಥಾ ನಾಯಕತ್ವದೊಂದಿಗೆ ಸಮ್ಮಿಶ್ರ ಸರ್ಕಾರ ರಚನೆಗೆ ಒಪ್ಪಂದ ಮಾಡಿಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾದರೆ ತ್ರಿಪುರಾದಲ್ಲಿ ಬಿಜೆಪಿಗೆ ಸರ್ಕಾರ ರಚಿಸುವುದು ಕಷ್ಟವಾಗಲಿದೆ. ಟಿಪ್ರಾದ ನಾಯಕ ಪ್ರದ್ಯೋತ್ ಕಾಂಗ್ರೆಸ್‌ನ ಜಿತೇಂದ್ರ ಸಿಂಗ್ ಅವರೊಂದಿಗೆ ನಿಕಟ ಸ್ನೇಹ ಹೊಂದಿದ್ದಾರೆ. ಹೀಗಾಗಿ ಜಿತೇಂದ್ರ ಸಿಂಗ್ ಪ್ರದ್ಯೋತ್ ಅವರೊಂದಿಗೆ ಸಂಪರ್ಕ ಸಾಧಿಸಿದ್ದಾರೆ ಎನ್ನಲಾಗಿದೆ. ಉನ್ನತ ಮೂಲಗಳ ಪ್ರಕಾರ, ಕಾಂಗ್ರೆಸ್ ನಾಯಕರು ತ್ರಿಪುರಾದಲ್ಲಿದ್ದಾರೆ ಮತ್ತು ಅವರ ಮತ್ತು ಪ್ರದ್ಯೋತ್ ನಡುವಿನ ಸಭೆ ಶೀಘ್ರದಲ್ಲೇ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.
ತಿಪ್ರಾ ಮೋಥಾ ಜೊತೆ ಮಾತುಕತೆ ಮುಂದುವರೆಸಲು ಜಿತೇಂದ್ರ ಅವರ ಜೊತೆಗೆ ಮತ್ತೊಬ್ಬ ಹಿರಿಯ ಕಾಂಗ್ರೆಸ್ ನಾಯಕ ಮುಕುಲ್ ವಾಸ್ನಿಕ್ ಕೂಡ ಇದ್ದಾರೆ. ತ್ರಿಪುರಾದ ರೆಸಾರ್ಟ್‌ನಲ್ಲಿ ವಾಸ್ನಿಕ್ ಮತ್ತು ಜಿತೇಂದ್ರ ಸಿಂಗ್ ಪ್ರದ್ಯೋತ್ ಅವರನ್ನು ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜ್ಯೋತಿರಾದಿತ್ಯ ಸಿಂಧಿಯಾ ಅವರ ಸೋದರಸಂಬಂಧಿಯಾಗಿರುವ ಪ್ರದ್ಯೋತ್ ಅವರೊಂದಿಗೆ ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಈ ಪ್ರಯತ್ನ ಸಫಲವಾದರೆ ಬಿಜೆಪಿ ಮತ್ತು ಟಿಪ್ರಾ ನಡುವೆ ಮೈತ್ರಿ ಮಾತುಕತೆಗಳು ನಡೆಯಬಹುದು.