ಸೂರತ್ (ಗುಜರಾತ್):ಗುಜರಾತ್ ವಿಧಾನಸಭಾ ಚುನಾವಣೆಗೆ ಮತದಾನ ದಿನಾಂಕ ಹತ್ತಿರವಾಗುತ್ತಿದೆ. ಬುಧವಾರ ನಡೆದ ಹೈಡ್ರಾಮದಲ್ಲಿ ಸೂರತ್ನ ಪೂರ್ವ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿದ್ದ ಕಾಂಚನ್ ಜರಿವಾಲಾ ಏಕಾಏಕಿ ತಮ್ಮ ನಾಮಪತ್ರ ವಾಪಸ್ ಪಡೆದುಕೊಂಡು ಶಾಕ್ ನೀಡಿದ್ದಾರೆ. ಇದರಿಂದ ಆಪ್ ನಾಯಕರು ಎಚ್ಚೆತ್ತುಕೊಂಡಿದ್ದು, ಸೂರತ್ ಜಿಲ್ಲೆಯಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಜ್ಞಾತ ಸ್ಥಳಕ್ಕೆ ಸ್ಥಳಾಂತರ ಮಾಡಿದೆ.
ಒಟ್ಟಾರೆ 182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ ಡಿ.1 ಮತ್ತು 5ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಅದರಲ್ಲೂ ಮೊದಲ ಹಂತದ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಇಂದು ಕೊನೆಯ ದಿನವಾಗಿದೆ. ಆದ್ದರಿಂದ ಕಾಂಚನ್ ಜರಿವಾಲಾ ಇದ್ದಕ್ಕಿದ್ದಂತೆ ನಾಮಪತ್ರ ಹಿಂಪಡೆದಿದ್ದರಿಂದ ಆಮ್ ಆದ್ಮಿ ಪಕ್ಷ ಮುಂದೆಯೂ ಇಂತಹ ಯಾವುದೇ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲು ಸಿದ್ಧವಾಗಿಲ್ಲ.
ಆಮ್ ಆದ್ಮಿ ಲೆಕ್ಕಾಚಾರ: ದಕ್ಷಿಣ ಗುಜರಾತ್‌ನಲ್ಲಿ ಆಮ್ ಆದ್ಮಿ ಪಕ್ಷ ತನ್ನದೇ ಆಗ ಲೆಕ್ಕಾಚಾರವನ್ನು ಹೊಂದಿದೆಯಂತೆ. ಹೀಗಾಗಿಯೇ ಈ ಲೆಕ್ಕಾಚಾರ ತಲೆ ಕೆಳಗಾಗದಂತೆ ನೋಡಿಕೊಳ್ಳಲು ಮುಂದಾಗಿದೆ. ವಿಶೇಷವಾಗಿ ಈ ಹಿಂದೆ ಆಮ್ ಆದ್ಮಿ ಪಕ್ಷವು ಸೂರತ್ ಪಾಲಿಕೆ ಚುನಾವಣೆಯಲ್ಲಿ ಭರ್ಜರಿ ಯಶಸ್ಸು ಸಾಧಿಸಿತ್ತು. ಇದರ ಫಲಿತಾಂಶದ ಆಧಾರದ ಮೇಲೆ ವಿಧಾನಸಭೆ ಚುನಾವಣೆಯನ್ನೂ ಎದುರಿಸಲು ಆಮ್ ಆದ್ಮಿ ಪಕ್ಷ ಸಜ್ಜಾಗಿದೆ.
ಕಳೆದ ನಾಲ್ಕು ತಿಂಗಳಿನಿಂದ ಆಮ್ ಆದ್ಮಿ ಪಕ್ಷದ ವರಿಷ್ಠ ಅರವಿಂದ್ ಕೇಜ್ರಿವಾಲ್ ಭಾರಿ ಪ್ರಚಾರದಲ್ಲೂ ತೊಡಗಿಸಿಕೊಂಡಿದ್ದಾರೆ. ಆದರೆ, ಇದರ ನಡುವೆ ಸೂರತ್ನ ಪೂರ್ವ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಕಾಂಚನ್ ಜರಿವಾಲಾ ತಮ್ಮ ನಾಮಪತ್ರ ಹಿಂಪಡೆದಿರುವುದು ಆಮ್ ಆದ್ಮಿ ಪಕ್ಷವನ್ನು ಚಿಂತೆಗೀಡು ಮಾಡಿದೆ. ನಾಮಪತ್ರಗಳ ವಾಪಸ್ ಪಡೆಯುವಂತೆ ಪ್ರತಿಪಕ್ಷಗಳು ಆಪ್ ಅಭ್ಯರ್ಥಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಸಂಶಯವೂ ಆಪ್ಗೆ ಕಾಡುತ್ತಿದೆಯಂತೆ.