ಕರ್ನಾಟಕ

karnataka

Air India pilot: ಕೆಲಸದ ಅವಧಿ ಮುಗಿಯಿತೆಂದು 350 ಪ್ರಯಾಣಿಕರನ್ನು ಅರ್ಧ ದಾರಿಯಲ್ಲೇ ಬಿಟ್ಟ ಏರ್​ ಇಂಡಿಯಾ ಪೈಲಟ್​!

By

Published : Jun 26, 2023, 3:34 PM IST

ಆಶ್ಚರ್ಯಕರ ಘಟನೆಯೊಂದರಲ್ಲಿ ಲಂಡನ್‌ನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದ ಪೈಲಟ್ ತನ್ನ ಕೆಲಸದ ಅವಧಿ ಮುಗಿಯಿತು ಎಂದು ಜೈಪುರದಲ್ಲೇ ಪ್ರಯಾಣಿಕರನ್ನು ಇಳಿಸಿದ್ದಾರೆ. 6 ಗಂಟೆಗಳ ಬಳಿಕ ಪ್ರಯಾಣಿಕರನ್ನು ವೋಲ್ವೋ ಬಸ್​, ಕ್ಯಾಬ್​ ಮೂಲಕ ಸಾಗಿಸಲಾಗಿದೆ.

ಏರ್​ ಇಂಡಿಯಾ ಪೈಲಟ್​
ಏರ್​ ಇಂಡಿಯಾ ಪೈಲಟ್​

ಜೈಪುರ (ರಾಜಸ್ಥಾನ):ಏರ್​ ಇಂಡಿಯಾ ವಿಮಾನಯಾನ ಸಂಸ್ಥೆ ದಿನಕ್ಕೊಂದು ವಿವಾದಕ್ಕೆ ಸಿಲುಕುತ್ತಲೇ ಇರುತ್ತದೆ. ಲಂಡನ್‌ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಎಐ ಫ್ಲೈಟ್ 112 ಪ್ರತಿಕೂಲ ಹವಾಮಾನದಿಂದಾಗಿ ಜೈಪುರದಲ್ಲಿ ತುರ್ತು ಭೂಸ್ಪರ್ಶ ಕಂಡಿದೆ. ಕ್ಲಿಯರೆನ್ಸ್​ ಸಿಕ್ಕ ಬಳಿಕ ಪೈಲಟ್ ತನ್ನ ಕರ್ತವ್ಯದ ಅವಧಿ ಮುಗಿದಿದೆ ಎಂದು ವಿಮಾನ ಹಾರಿಸಲು ನಿರಾಕರಿಸಿದ್ದಾರೆ. ಇದರಿಂದ ಪ್ರಯಾಣಿಕರು ಬಸ್​, ಕ್ಯಾಬ್​ಗಳ ಮೂಲಕ ತಮ್ಮ ಗಮ್ಯ ಸ್ಥಾನ ತಲುಪಿದ್ದಾರೆ. ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಜೂನ್ 25ರಂದು ಈ ಘಟನೆ ನಡೆದಿದೆ. ಎಐ ಫ್ಲೈಟ್ 112 ಮುಂಜಾನೆ 4 ಗಂಟೆಗೆ ದೆಹಲಿ ತಲುಪಬೇಕಿತ್ತು. ದುರದೃಷ್ಟವಶಾತ್, ಪ್ರತಿಕೂಲ ಹವಾಮಾನದ ಕಾರಣ ಜೈಪುರಕ್ಕೆ ತಿರುಗಿಸಲಾಗಿದೆ. ಅಲ್ಲಿ ಸುಮಾರು 2 ಗಂಟೆಗಳ ವಿಳಂಬದ ನಂತರ, ದೆಹಲಿ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ವಿಮಾನ ಹಾರಾಟಕ್ಕೆ ಅನುಮತಿ ನೀಡಿದೆ. ಆಶ್ಚರ್ಯಕರ ಸಂಗತಿಯೆಂದರೆ, ತನ್ನ ಕೆಲಸದ ಸಮಯ ಮುಗಿದಿದೆ. ಆದ್ದರಿಂದ ವಿಮಾನ ಹಾರಿಸಲ್ಲ ಎಂದು ಪೈಲಟ್ ನಿರಾಕರಿಸಿದ್ದಾರೆ.

ಇದರಿಂದ 350 ಕ್ಕೂ ಹೆಚ್ಚು ಪ್ರಯಾಣಿಕರು ಜೈಪುರ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದರು. 6 ಗಂಟೆಗಳು ಕಳೆದರೂ ಜನರ ಪ್ರಯಾಣಕ್ಕೆ ಯಾವುದೇ ವ್ಯವಸ್ಥೆ ಮಾಡಲಾಗಿಲ್ಲ. ಇದರಿಂದ ಜನರು ಆಕ್ರೋಶ ಹೊರಹಾಕಿದ್ದಾರೆ. ಯಾವುದೇ ಮಾಹಿತಿ ನೀಡದೇ ತಮ್ಮನ್ನು ನಿಲ್ದಾಣದಲ್ಲೇ ಉಳಿಸಿಕೊಂಡಿದ್ದಾರೆ. ಮುಂದಿನ ಪ್ರಯಾಣದ ಬಗ್ಗೆಯೂ ಸಂಸ್ಥೆ ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಟ್ವಿಟ್ಟರ್​​ನಲ್ಲಿ ಕಿಡಿಕಾರಿದ್ದಾರೆ.

6 ಗಂಟೆ ಕಾದು ಕುಳಿತ ಪ್ರಯಾಣಿಕರು:ಜೈಪುರ ವಿಮಾನ ನಿಲ್ದಾಣದಲ್ಲಿ 6 ಗಂಟೆಗೂ ಹೆಚ್ಚು ಕಾಲ ಪ್ರಯಾಣಿಕರನ್ನು ಕಾಯಿಸಿದ್ದಾರೆ. ವಿಮಾನ ವ್ಯವಸ್ಥೆಯ ಬಗ್ಗೆ ಯಾವುದೇ ಮಾಹಿತಿಯನ್ನೂ ಸಂಸ್ಥೆ ಜನರೊಂದಿಗೆ ಹಂಚಿಕೊಂಡಿಲ್ಲ. ಇದರಿಂದ ಕೆರಳಿದ ಪ್ರಯಾಣಿಕರು ಅಲ್ಲಿನ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದ್ದಾರೆ. ಇದರ ವಿಡಿಯೋವನ್ನು ವ್ಯಕ್ತಿಯೊಬ್ಬ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಬಸ್​ ಮೂಲಕ ರವಾನೆ:ಪ್ರಯಾಣಿಕರು ನಿಲ್ದಾಣದಲ್ಲಿ ಆಕ್ರೋಶ ಹೊರಹಾಕಿದ ಬಳಿಕ ಕಡೆಗೂ ಎಚ್ಚೆತ್ತ ಏರ್​ ಇಂಡಿಯಾ ಸಿಬ್ಬಂದಿ ಕ್ಯಾಬ್, ವೋಲ್ವೋ ಬಸ್​ ವ್ಯವಸ್ಥೆ ಮಾಡಿದ್ದಾರೆ. 6 ಗಂಟೆಗಳ ಬಳಿಕ ಕೆಲವು ಪ್ರಯಾಣಿಕರನ್ನು ಅಂತಿಮವಾಗಿ ವೋಲ್ವೋ ಬಸ್ ಮೂಲಕ ದೆಹಲಿಗೆ ಕರೆತರಲಾಗಿದೆ. ಇನ್ನು ಕೆಲವರಿಗೆ ಕ್ಯಾಬ್‌ ವ್ಯವಸ್ಥೆ ಮಾಡಲಾಗಿದೆ.

ಪ್ರಯಾಣಿಕರಲ್ಲಿ ಒಬ್ಬರು ಟ್ವಿಟರ್​ನಲ್ಲಿ ಸರಣಿ ವಿಡಿಯೋ ಹಂಚಿಕೊಂಡಿದ್ದು, ಕೇಂದ್ರ ಸರ್ಕಾರ ದೂರು ಸಲ್ಲಿಸಿದ್ದಾರೆ. ನಾವು 6 ಗಂಟೆಯಿಂದ ಜೈಪುರ ವಿಮಾನ ನಿಲ್ದಾಣದಲ್ಲೇ ಕಾಯುತ್ತಿದ್ದೇವೆ. ದೆಹಲಿಗೆ ವಿಮಾನ ವ್ಯವಸ್ಥೆ ಮಾಡುವಲ್ಲಿ ಸಂಸ್ಥೆ ಕಾಳಜಿ ವಹಿಸುತ್ತಿಲ್ಲ. ಊಟ, ನೀರಿನ ವ್ಯವಸ್ಥೆಯೂ ಮಾಡಲಾಗಿಲ್ಲ. 350 ಪ್ರಯಾಣಿಕರಲ್ಲಿ ವೃದ್ಧರು, ಮಕ್ಕಳಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ವಿಮಾನಯಾನ ಸಚಿವ ಸಿಂಧಿಯಾ ಅವರಿಗೆ ಟ್ಯಾಗ್​ ಮಾಡಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಏರ್ ಇಂಡಿಯಾ ಸಂಸ್ಥೆ, ಉಂಟಾದ ಅನಾನುಕೂಲತೆಯನ್ನು ಸರಿಪಡಿಸಲು ತಂಡ ಕೆಲಸ ಮಾಡುತ್ತಿದೆ ಎಂದು ಹೇಳಿದೆ.

ಇದನ್ನೂ ಓದಿ:6 ಕಿಮೀ ಉದ್ದಕ್ಕೂ 2 ಬಸ್​, 600 ಕಾರುಗಳೊಂದಿಗೆ ಮಹಾರಾಷ್ಟ್ರ ಪ್ರವಾಸ ಕೈಗೊಂಡ ತೆಲಂಗಾಣ ಸಿಎಂ ಕೆಸಿಆರ್​

ABOUT THE AUTHOR

...view details