ನವದೆಹಲಿ: ದುಬೈನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದ ಪೈಲಟ್ ಡಿಜಿಸಿಎ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎನ್ನಲಾಗಿದೆ. ಮಹಿಳಾ ಸ್ನೇಹಿತೆಯೊಬ್ಬರಿಗೆ ಕಾಕ್‌ಪಿಟ್‌ಗೆ ಪ್ರವೇಶಿಸಲು ಪೈಲಟ್ ಅನುಮತಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವರ್ಷದ ಫೆಬ್ರವರಿ 27 ರಂದು ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಘಟನೆಯ ಮಾಹಿತಿ ಹೊರಬಿದ್ದ ನಂತರ ಡಿಜಿಸಿಎ ಈ ಬಗ್ಗೆ ತನಿಖೆ ಆರಂಭಿಸಿದೆ.
ಡಿಜಿಸಿಎ ಹೇಳಿಕೆಯ ಪ್ರಕಾರ, ಫೆಬ್ರವರಿ 27 ರಂದು ದುಬೈನಿಂದ ದೆಹಲಿಗೆ ಹಾರಾಟ ನಡೆಸುತ್ತಿದ್ದ ಏರ್ ಇಂಡಿಯಾ ವಿಮಾನದ ಪೈಲಟ್ ಡಿಜಿಸಿಎ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿ ಮಹಿಳಾ ಸ್ನೇಹಿತೆ ಕಾಕ್‌ಪಿಟ್‌ಗೆ ಪ್ರವೇಶಿಸಲು ಅನುಮತಿ ನೀಡಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ಬಗ್ಗೆ ಡಿಜಿಸಿಎ ವಿಸ್ತೃತ ತನಿಖೆಗೆ ಆದೇಶಿಸಿದೆ. ತನಿಖಾ ತಂಡವು ಸಂಬಂಧಿತ ಸಂಗತಿಗಳನ್ನು ಪರಿಶೀಲಿಸುತ್ತದೆ ಎಂದು ಹಿರಿಯ ಡಿಜಿಸಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೈಲಟ್ ಈ ಪ್ರಮಾದ ಎಸಗಿದ್ದರೆ ಅದು ಡಿಜಿಸಿಎ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ.
ಕ್ಯಾಬಿನ್ ಸಿಬ್ಬಂದಿಯೊಬ್ಬರು ಈ ಘಟನೆಯ ಬಗ್ಗೆ ನಿಯಂತ್ರಕರಿಗೆ ದೂರು ನೀಡಿದ್ದಾರೆ. ಪೈಲಟ್ ತನ್ನ ಮಹಿಳಾ ಸ್ನೇಹಿತೆಯನ್ನು ಕಾಕ್‌ಪಿಟ್‌ಗೆ ಕರೆತರುವಂತೆ ಸಿಬ್ಬಂದಿಗೆ ತಿಳಿಸಿದರು ಮತ್ತು ಅವಳಿಗಾಗಿ ಕೆಲ ದಿಂಬುಗಳನ್ನು ತಂದು ಕೊಡುವಂತೆ ಕೇಳಿದರು. ಮಹಿಳೆ ಮೊದಲ ವೀಕ್ಷಕ ಸೀಟಿನಲ್ಲಿ ಕುಳಿತಿದ್ದರು ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಇದಕ್ಕೂ ಮುನ್ನ ಏಪ್ರಿಲ್ 18 ರಂದು ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ವಿಂಡ್ ಶೀಲ್ಡ್ ಬಿರುಕು ಬಿಟ್ಟ ಸಂಶಯದ ಆಧಾರದಲ್ಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲು ಅನುಮತಿ ಕೇಳಿತ್ತು. ಆದಾಗ್ಯೂ ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಆಗಿತ್ತು.