ಹೈದರಾಬಾದ್/ಜೌನಪುರ:ಆಂಧ್ರಪ್ರದೇಶದ ರೈಲ್ವೆ ಪೊಲೀಸರು ಶನಿವಾರ ಬೆಳಗ್ಗೆ ಪ್ರಕಾಶಂ ಜಿಲ್ಲೆಯಲ್ಲಿ ಮಾಜಿ ಸೈನಿಕ ಸುಬ್ಬರಾವ್ ಎಂಬವರನ್ನು ಬಂಧಿಸಿದ್ದಾರೆ. ಈತ ಶುಕ್ರವಾರ ಸಿಕಂದರಾಬಾದ್ ರೈಲ್ವೆ ನಿಲ್ದಾಣದಲ್ಲಿ ನಡೆದ ಹಿಂಸಾಚಾರದ ಹಿಂದಿನ 'ಮಾಸ್ಟರ್ ಮೈಂಡ್' ಎಂದು ತಿಳಿದುಬಂದಿದೆ.
ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ವಿಧ್ವಂಸಕ ಕೃತ್ಯದಲ್ಲಿ ತೊಡಗಿದ್ದ ಪ್ರತಿಭಟನಾಕಾರರ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಪೊಲೀಸ್ ಮೂಲಗಳ ಪ್ರಕಾರ, ಪ್ರಕರಣದ ಹೆಚ್ಚಿನ ತನಿಖೆಗಾಗಿ ಆರೋಪಿಯನ್ನು ಪ್ರಸ್ತುತ ನರಸರಾವ್‌ಪೇಟೆಗೆ ಕರೆತರಲಾಗಿದೆ.
ಸುಬ್ಬರಾವ್, ನರಸರಾವ್‌ಪೇಟೆ ಮತ್ತು ಹೈದರಾಬಾದ್‌ನಲ್ಲಿ ಡಿಫೆನ್ಸ್ ಅಕಾಡೆಮಿ ನಡೆಸುತ್ತಿದ್ದಾರೆ. ಅಲ್ಲಿ ಸಶಸ್ತ್ರಪಡೆಗಳ ಆಕಾಂಕ್ಷಿಗಳಿಗೆ ತರಬೇತಿ ನೀಡುತ್ತಾರೆ. ಅಗ್ನಿಪಥ್ ಯೋಜನೆ ಘೋಷಣೆಯಾದ ಬಳಿಕ, ವಾಟ್ಸ್ಆ್ಯಪ್ ಗುಂಪುಗಳನ್ನು ರಚಿಸಿಕೊಂಡು ಅದರಲ್ಲಿ ಹಲವಾರು ವಿಚಾರಗಳನ್ನು ಹಂಚಿ ಯುವಕರನ್ನು ವಿಧ್ವಂಸಕ ಕೃತ್ಯಗಳಿಗೆ ಪ್ರಚೋದಿಸಿದ್ದಾರೆ ಅನ್ನೋದು ಇವರ ಮೇಲಿರುವ ಗುರುತರ ಆರೋಪ.
ಸರ್ಕಾರ ಇತ್ತೀಚೆಗೆ ಭೂಸೇನೆ, ನೌಕಾಸೇನೆ ಮತ್ತು ವಾಯುಪಡೆಯಲ್ಲಿ ಸೈನಿಕರ ನೇಮಕಾತಿಗಾಗಿ 'ಅಗ್ನಿಪಥ್' ಯೋಜನೆ ಜಾರಿಗೆ ತಂದಿದೆ. ಇದನ್ನು ವಿರೋಧಿಸಿ ದೇಶದ ಹಲವು ರಾಜ್ಯಗಳಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ಇದು ತೆಲಂಗಾಣಕ್ಕೂ ವ್ಯಾಪಿಸಿ, ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ಪ್ರತಿಭಟನಾಕಾರರು ಮೂರು ಪ್ಯಾಸೆಂಜರ್ ರೈಲುಗಳ ಕೆಲವು ಬೋಗಿಗಳಿಗೆ ಬೆಂಕಿ ಹಚ್ಚಿದ್ದರು. ಹಿಂಸಾಚಾರದಲ್ಲಿ ಸೇನಾ ಆಕಾಂಕ್ಷಿ ರಾಕೇಶ್(24) ಪೊಲೀಸರ ಗುಂಡಿಗೆ ಬಲಿಯಾಗಿದ್ದ.