ನವದೆಹಲಿ:ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ಪೆಗಾಸಸ್ ಸ್ಪೈವೇರ್ ಆರೋಪ ಹೊರಿಸಿದ್ದ ಕಾಂಗ್ರೆಸ್ ಇದೀಗ ಅಂಥದ್ದೇ ಗೂಢಚರ ಸಾಫ್ಟ್‌ವೇರ್ ಬಳಕೆ ಮಾಡಲು ಮುಂದಾಗಿದೆ ಎಂದು ಹೇಳಿದೆ. ಇಸ್ರೇಲ್‌ನಿಂದ ಪೆಗಾಸಸ್ ಸ್ಪೈವೇರ್ ಖರೀದಿಸಿದ ನಂತರ, ಈಗ ಹೊಸ ಸ್ಪೈವೇರ್ ಕಾಗ್ನೈಟ್ ಅನ್ನು ಖರೀದಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಇದು ಪ್ರಜಾಪ್ರಭುತ್ವದ ವಿರೋಧಿ ನಡೆದ ಎಂದು ಕಾಂಗ್ರೆಸ್ ಸೋಮವಾರ ಗಂಭೀರ ಆರೋಪ ಮಾಡಿದೆ.
ಸ್ಪೈವೇರ್ ಪೆಗಾಸಸ್, ಕೇಂಬ್ರಿಡ್ಜ್ ಅನಾಲಿಟಿಕಾ ಮತ್ತು ಟೀಮ್ ಜಾರ್ಜ್‌ನಂತೆಯೇ, ಕೇಂದ್ರ ಸರ್ಕಾರ ಮಾಧ್ಯಮ ಸಂಸ್ಥೆಗಳು, ನಾಗರಿಕ ಹಕ್ಕುಗಳ ಕಾರ್ಯಕರ್ತರು, ನ್ಯಾಯಾಂಗ ಮತ್ತು ಇತರೆ ಸಂಸ್ಥೆಗಳ ಮೇಲೆ ಕಣ್ಣಿಡಲು ಕಾಗ್ನೈಟ್ ಎಂಬ ಹೊಸ ಸ್ಪೈವೇರ್ ಅನ್ನು ಖರೀದಿಸುತ್ತಿದೆ. ಹೊಸ ಸ್ಪೈವೇರ್‌ಗಾಗಿ 986 ಕೋಟಿ ರೂಪಾಯಿ ಖರ್ಚು ಮಾಡಲು ಸರ್ಕಾರ ಸಿದ್ಧವಾಗಿದೆ ಎಂದು ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್ ಖೇರಾ ಆರೋಪಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಕಾಂಗ್ರೆಸ್ ಮುಖಂಡ, ಹೆಚ್ಚಿನ ದೇಶಗಳಿಂದ ಕಪ್ಪುಪಟ್ಟಿಗೆ ಸೇರಿಸಲ್ಪಟ್ಟಿರುವ ಪೆಗಾಸಸ್‌ಗಿಂತ ಕಡಿಮೆ ಪ್ರೊಫೈಲ್ ಹೊಂದಿರುವ ಹೊಸ ಸ್ಪೈವೇರ್‌ಗಾಗಿ ಸರ್ಕಾರ ಹುಡುಕಾಟ ನಡೆಸುತ್ತಿದೆ. ರಕ್ಷಣಾ ಮತ್ತು ಗುಪ್ತಚರ ಅಧಿಕಾರಿಗಳು ಹೊಸ ಸ್ಪೈವೇರ್ ಅನ್ನು ಎನ್ಎಸ್ಪಿ ಗ್ರೂಪ್ನಿಂದ ಪಡೆದುಕೊಳ್ಳಲು ನಿರ್ಧರಿಸಿದೆ. ಇದು ಪೆಗಾಸಸ್ ಸ್ಪೈವೇರ್ನಂತೆಯೇ ಕಾರ್ಯಾಚರಣೆ ಮಾಡುತ್ತದೆ. ಇದಕ್ಕಾಗಿ 986 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲು ಸರ್ಕಾರ ಸಿದ್ಧವಾಗಿದೆ. ಕೇಂದ್ರ ಸರ್ಕಾರ ಹೊಸ ಸ್ಪೈವೇರ್ ಖರೀದಿಯ ಅಂತಿಮ ಚರ್ಚೆಯಲ್ಲಿದೆ. ರಕ್ಷಣಾ ಸಚಿವಾಲಯವು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ ಎಂಬದು ನಿಜವೇ ಎಂದು ಖೇರಾ ಪ್ರಶ್ನಿಸಿದ್ದಾರೆ.