ನಾಗಾಂವ್ (ಅಸ್ಸೋಂ): ಅಸ್ಸೋಂನಲ್ಲೂ ಬುಲ್ಡೋಜರ್ ಸದ್ದು ಮಾಡಿದೆ. ನಾಗಾಂವ್ ಜಿಲ್ಲೆಯಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ ವ್ಯಕ್ತಿ ಮೃತಪಟ್ಟ ಆರೋಪದ ಮೇಲೆ ಠಾಣೆಗೆ ಬೆಂಕಿ ಹಚ್ಚಿದ್ದ ಐವರ ಮನೆಗಳನ್ನು ಜಿಲ್ಲಾಡಳಿತ ಬುಲ್ಡೋಜರ್ ಮೂಲಕ ನೆಲಸಮ ಮಾಡಿದೆ.
ಇಲ್ಲಿನ ಬತದ್ರಾವ ಪೊಲೀಸರ ವಶದಲ್ಲಿದ್ದ ಶಫಿವುಲ್ಲಾ ಇಸ್ಲಾಂ ಎಂಬ ವ್ಯಕ್ತಿ ಶನಿವಾರ ಮೃತಪಟ್ಟಿದ್ದ. ಇದರಿಂದ ಆಕ್ರೋಶಗೊಂಡಿದ್ದ ಕುಟಂಬಸ್ಥರು ಠಾಣೆ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದ್ದರು. ಅಲ್ಲದೇ, ಈ ಘಟನೆಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ವರಿಷ್ಠಾಧಿಕಾರಿ ಲೀನಾ ಡೋಲಿ, ಇಸ್ಲಾಂ ಸಾವಿನ ಬಗ್ಗೆ ಮತ್ತು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದ ಪ್ರಕರಣಗಳ ತನಿಖೆ ನಡೆಸಲಾಗುತ್ತಿದೆ. ಈಗಾಗಲೇ ಠಾಣೆ ಮೇಲೆ ದಾಳಿ ಮಾಡಿದವರ ಪೈಕಿ ಮೂವರನ್ನು ಬಂಧಿಸಲಾಗಿದೆ ಎಂದು ಹೇಳಿದ್ಧಾರೆ.
ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದವರಿಗೆ ತಕ್ಕಶಾಸ್ತಿ ಠಾಣಾಧಿಕಾರಿ ಅಮಾನತು : ಇತ್ತ, ಇಸ್ಲಾಂ ಸಾವಿನ ಬಗ್ಗೆ ನಿಖರವಾಗಿ ತನಿಖೆ ಮಾಡದ ಬತದ್ರಾವ ಪೊಲೀಸ್ ಠಾಣೆಯ ಅಧಿಕಾರಿಯನ್ನು ಇಲಾಖೆ ಅಮಾನತುಗೊಳಿಸಿ ಆದೇಶಿಸಿದೆ. ಕಸ್ಟಡಿಯಲ್ಲಿ ವ್ಯಕ್ತಿಯ ಸಾವು ದುರದೃಷ್ಟಕರವಾಗಿದ್ದು, ನಿಷ್ಪಕ್ಷಪಾತ ತನಿಖೆಗಾಗಿ ಠಾಣಾಧಿಕಾರಿಯನ್ನು ಮಾಡಲಾಗಿದೆ. ಇದರಲ್ಲಿ ಯಾರೇ ತಪ್ಪಿಸ್ಥರಾಗಿದ್ದರೂ ಮರು ಕ್ಷಣವೂ ಯೋಚಿಸದೆ ಶಿಕ್ಷಿಸುವುದಾಗಿ ಡಿಜಿಪಿ ಭಾಸ್ಕರ್ ಜ್ಯೋತಿ ಮಹಾಂತ ತಿಳಿಸಿದ್ದಾರೆ.
ಇದೇ ವೇಳೆ ಠಾಣೆ ಮೇಲೆ ನಡೆದ ದಾಳಿಯು ನಿಯೋಜಿತ ಕೃತವಾಗಿದೆ. ದುಷ್ಕರ್ಮಿಗಳು ಕಾನೂನನ್ನು ತಮ್ಮ ಕೈಗೆ ಎತ್ತಿಕೊಂಡು ದಾಳಿ ನಡೆಸಿದ್ದಾರೆ. ಅಲ್ಲದೇ, ಮೃತ ವ್ಯಕ್ತಿ ಮತ್ತು ಆತನ ಸಂಬಂಧಿಕರು ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದಾರೆ.
ಇದರ ದಾಖಲೆಗಳು ಠಾಣೆಯೊಳಗೆ ಇದ್ದವು. ಆದರೆ, ಈಗ ಎಲ್ಲವೂ ಸುಟ್ಟು ಹೋಗಿವೆ. ಆದರೆ, ಇಲ್ಲಿಗೆ ದುಷ್ಕರ್ಮಿಗಳು ತಾವು ಪಾರಾಗಿದ್ದೇವೆ ಎಂದು ಭಾವಿಸಬಾರದು. ಯಾರೂ ಕೂಡ ಕಾನೂನಿನಿಂದ ತಪ್ಪಿಸಿಕೊಳ್ಳಲು ಬಿಡುವುದಿಲ್ಲ ಎಂದು ಡಿಜಿಪಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:ಲಾಕಪ್ ಡೆತ್ ಆರೋಪಕ್ಕೆ ಹೊತ್ತಿ ಉರಿದ ಪೊಲೀಸ್ ಠಾಣೆ..ಅಸ್ಸೋಂನ ನಾಗಾಂವ್ನಲ್ಲಿ ಉದ್ವಿಗ್ನ ಸ್ಥಿತಿ