ಶಿಮ್ಲಾ (ಹಿಮಾಚಲ ಪ್ರದೇಶ) :ಹಿಮಾಚಲ ಪ್ರದೇಶದ ಅತಿದೊಡ್ಡ ಸೇಬು ಖರೀದಿ ಕಂಪನಿಯಾದ ಅದಾನಿ ಆಗ್ರೋಫ್ರೆಶ್ ಮಂಡಿಗಳಿಂದ ಸೇಬು ಖರೀದಿಸಲು ಆರಂಭಿಸಿದೆ. ಇದೇ ಮೊದಲ ಬಾರಿಗೆ ಅದಾನಿ ಕಂಪನಿ ಬಿಡ್ ಮಾಡುವ ಮೂಲಕ ಮುಕ್ತ ಮಾರುಕಟ್ಟೆಯಿಂದ ಸೇಬು ಖರೀದಿಸುತ್ತಿದೆ.
ಅದಾನಿ ಕಂಪನಿಯು ಸಾಮಾನ್ಯವಾಗಿ ತೋಟಗಳಲ್ಲಿ ಬೆಳೆಗಾರರಿಂದ ಸೇಬುಗಳನ್ನು ಖರೀದಿಸುತ್ತಿತ್ತು. ಆದರೆ, ಈ ಬಾರಿ ಕಡಿಮೆ ಸೇಬು ಬೆಳೆದಿರುವುದರಿಂದ ರಾಂಪುರ, ಸೈನ್ಜ್ ಮತ್ತು ರೋಹ್ರುದಲ್ಲಿರುವ ತನ್ನ ಸಿಎ ಮಳಿಗೆಗಳ ಸ್ಥಳೀಯ ಮಂಡಿಗಳಿಂದ ಸೇಬುಗಳನ್ನು ಖರೀದಿಸಲು ಪ್ರಾರಂಭಿಸಿದೆ. ಕಂಪನಿಯ ಪ್ರತಿನಿಧಿಗಳು ಮಾರುಕಟ್ಟೆಗಳಲ್ಲಿ ನಡೆಯುವ ಬಿಡ್ಡಿಂಗ್‌ನಲ್ಲಿ ಭಾಗವಹಿಸಿ ಸೇಬುಗಳನ್ನು ಖರೀದಿಸಲಿದ್ದು, ಬಳಿಕ ಸಿಎ ಸ್ಟೋರ್‌ಗಳಿಗೆ ತಲುಪಿಸಲಿದ್ದಾರೆ. ಏಕೆಂದರೆ ದೂರದ ಮಂಡಿಗಳಿಂದ ಸಿಎ ಸ್ಟೋರ್‌ಗಳಿಗೆ ಸೇಬುಗಳನ್ನು ಸಾಗಿಸಲು ಕಂಪನಿಗೆ ಹೆಚ್ಚು ಖರ್ಚಾಗಲಿದೆ. ಅದಕ್ಕಾಗಿಯೇ ಕಂಪನಿ ಸ್ಥಳೀಯ ಮಂಡಿಗಳ ಮೇಲೆ ಮಾತ್ರ ಗಮನಹರಿಸಿದೆ.
ಈ ಬಾರಿ ಅಂದುಕೊಂಡಂತೆ ಸೇಬು ಬೆಳೆ ಕಡಿಮೆ ಆಗಿರುವುದರಿಂದ, ಹಣ್ಣುಗಳು ಕೆಡದೇ ಇರುವಂತೆ ನೋಡಿಕೊಳ್ಳುವ ನಿಯಂತ್ರಿತ ಸ್ಟೋರ್‌ಗಳು ಖಾಲಿ ಬಿದ್ದಿವೆ. ಕಂಪನಿಯ ಮೂರು ಮಳಿಗೆಗಳ ಒಟ್ಟು ಸಾಮರ್ಥ್ಯ 25 ಸಾವಿರ ಮೆಟ್ರಿಕ್ ಟನ್, ಆದರೆ ಸ್ಟೋರ್‌ಗಳಿಗೆ ಕಡಿಮೆ ಸೇಬುಗಳು ತಲುಪುತ್ತಿವೆ. ಹೀಗಾಗಿ ಕಂಪನಿ ಮುಕ್ತವಾಗಿ ಬಿಡ್ ಮೂಲಕ ಮಂಡಿಗಳಿಂದ ಸೇಬುಗಳನ್ನು ಖರೀದಿ ಮಾಡುತ್ತಿದೆ. ಈಗಾಗಲೇ 4500 ಮೆಟ್ರಿಕ್ ಟನ್ ಸೇಬುಗಳನ್ನು ಖರೀದಿಸಿದ್ದು, ಸ್ಟೋರ್ಗಳನ್ನು ಭರ್ತಿ ಮಾಡಲು ಇನ್ನು 20 ಸಾವಿರ ಮೆಟ್ರಿಕ್ ಟನ್ ಸೇಬುಗಳು ಬೇಕಾಗಿವೆ. ಹಿಮಾಚಲ ಪ್ರದೇಶದ ತಗ್ಗು ಪ್ರದೇಶಗಳಲ್ಲಿ ಸೇಬು ಬೆಳೆಯುವ ಸೀಸನ್ ಸಂಪೂರ್ಣ ಮುಗಿದ್ದು, ಮಧ್ಯ ಭಾಗ ಪ್ರದೇಶಗಳಲ್ಲಿಯೂ ಸೀಸನ್ ಮುಗಿಯುವ ಹಂತದಲ್ಲಿದೆ. ಈಗ ಸೇಬು ಎತ್ತರದ ಪ್ರದೇಶಗಳಲ್ಲಿ ಮಾತ್ರವೇ ಕಂಡು ಬರುತ್ತಿದೆ.