ಮುಂಬೈ (ಮಹಾರಾಷ್ಟ್ರ):ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ವಿರುದ್ಧ ಮಾರಾಟ ತೆರಿಗೆ ಇಲಾಖೆ (Sales Tax department)ಯ ಕ್ರಮಗಳನ್ನು ಪ್ರಶ್ನಿಸಿ ಮಹಾರಾಷ್ಟ್ರದ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ಪುರಸ್ಕರಿಸಿರುವ ಉಚ್ಛ ನ್ಯಾಯಾಲಯವು ಮಾರಾಟ ತೆರಿಗೆ ಇಲಾಖೆಗೆ ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಯನ್ನು ಫೆಬ್ರವರಿ 6ಕ್ಕೆ ನಿಗದಿ ಪಡಿಸಿದೆ.
ಮಹಾರಾಷ್ಟ್ರ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಕಾಯಿದೆಯಡಿ 2012-13 ಮತ್ತು 2013-14ರ ಮೌಲ್ಯಮಾಪನ ವರ್ಷಗಳ ಬಾಕಿ ವಸೂಲಿ ಸಲುವಾಗಿ ಮುಂಬೈನ ಮಜಗಾಂವ್ ಮಾರಾಟ ತೆರಿಗೆಯ ಉಪ ಆಯುಕ್ತರು ಜಾರಿಗೊಳಿಸಿದ ನೋಟಿಸ್‌ಗಳನ್ನು ಪ್ರಶ್ನಿಸಿ ನಟಿ ಅನುಷ್ಕಾ ಶರ್ಮಾ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅನುಷ್ಕಾ ಎರಡು ಪ್ರತ್ಯೇಕ ಅರ್ಜಿಗಳ ಮೂಲಕ ಎರಡೂ ವರ್ಷಗಳ ಎರಡು ಪ್ರತ್ಯೇಕ ನೋಟಿಸ್‌ಗಳನ್ನು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಕೊಹ್ಲಿ ಖಾಸಗಿತನಕ್ಕೆ ಧಕ್ಕೆ: ಅಭಿಮಾನಿ ವಿರುದ್ಧ ಅನುಷ್ಕಾ ಕಿಡಿ
ಈ ಅರ್ಜಿಗಳನ್ನು ನ್ಯಾ.ನಿತಿನ್ ಜಾಮ್ದಾರ್ ಮತ್ತು ನ್ಯಾ.ಅಭಯ್ ಅಹುಜಾ ಅವರನ್ನೊಳಗೊಂಡ ನ್ಯಾಯ ಪೀಠವು ಗುರುವಾರ ಪುರಸ್ಕರಿಸಿ, ವಿಚಾರಣೆ ನಡೆಸಿತು. ಇದೇ ವೇಳೆ, ಈ ಅರ್ಜಿಗಳಿಗೆ ಮೂರು ವಾರಗಳಲ್ಲಿ ಉತ್ತರ ನೀಡುವಂತೆ ಮಾರಾಟ ತೆರಿಗೆ ಇಲಾಖೆಗೆ ನ್ಯಾಯಪೀಠವು ಸೂಚಿಸಿ, ವಿಚಾರಣೆಯನ್ನು ಮುಂದೂಡಿದೆ.
ಏನಿದು ತೆರಿಗೆ ಪ್ರಕರಣ?: ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಪತ್ನಿಯಾಗಿರುವ ನಟಿ ಅನುಷ್ಕಾ ಶರ್ಮಾ ಅವರಿಗೆ ಮಾರಾಟ ತೆರಿಗೆ ಇಲಾಖೆ ಬಾಕಿ ವಸೂಲಿ ಸಂಬಂಧ ನೋಟಿಸ್ ಜಾರಿ ಮಾಡಿತ್ತು. ಪ್ರಶಸ್ತಿ ಸಮಾರಂಭದಲ್ಲಿ ಅನುಷ್ಕಾ ಮಾಡಿದ ಆ್ಯಂಕರಿಂಗ್ ಮತ್ತು ಅವರು ನೀಡಿರುವ ಹೇಳಿಕೆಗಳು ಉತ್ಪನ್ನಗಳ ವಾಣಿಜ್ಯ ಜಾಹೀರಾತು ಎಂದು ಮಾರಾಟ ತೆರಿಗೆ ಇಲಾಖೆ ಆರೋಪಿಸಿತ್ತು.
ಇದಕ್ಕಾಗಿ 2012-13ನೇ ಸಾಲಿನ 12.3 ಕೋಟಿ ರೂಪಾಯಿ ಆದಾಯದ ಮೇಲೆ ಬಡ್ಡಿ ಸೇರಿದಂತೆ 1.2 ಕೋಟಿ ಮತ್ತು 2013-14ನೇ ಸಾಲಿನ 17 ಕೋಟಿ ಆದಾಯದ ಮೇಲೆ 1.6 ಕೋಟಿ ರೂಪಾಯಿ ಬಾಕಿ ವಸೂಲಿಗೆ ಮಜಗಾಂವ್ ಮಾರಾಟ ತೆರಿಗೆ ಇಲಾಖೆಯ ಉಪ ಆಯುಕ್ತರು ನೋಟಿಸ್ ಜಾರಿ ಮಾಡಿದ್ದರು. ಆದರೆ, ಈ ಲೆಕ್ಕಾಚಾರ ತಪ್ಪಾಗಿದೆ ಎಂದು ಅನುಷ್ಕಾ ಶರ್ಮಾ ಹೇಳಿದ್ದಾರೆ.
ನಾನು ಆ್ಯಂಕರಿಂಗ್ ಮಾಡಿದ್ದ ಪ್ರಶಸ್ತಿ ಸಮಾರಂಭಗಳ ಮೂಲಕ ಹಕ್ಕುಸ್ವಾಮ್ಯ ಪಡೆದುಕೊಂಡಿದ್ದೇನೆ. ಅವುಗಳ ಮಾರಾಟ ಮಾಡಿದ್ದೇನೆ ಅಥವಾ ವರ್ಗಾಯಿಸಿದ್ದೇನೆ ಎಂದು ಮೌಲ್ಯಮಾಪನ ಅಧಿಕಾರಿ (ಎಒ) ತಪ್ಪಾಗಿ ಭಾವಿಸಿದ್ದಾರೆ. ವಿಡಿಯೋಗಳ ಹಕ್ಕುಸ್ವಾಮ್ಯವನ್ನು ಯಾವಾಗಲೂ ನಿರ್ಮಾಪಕರೇ ಉಳಿಸಿಕೊಳ್ಳುತ್ತಾರೆ. ನಿರ್ಮಾಪಕರೇ ಇಂತಹ ವಿಡಿಯೋಗಳು ಮತ್ತು ಪ್ರದರ್ಶಕರ ಹಕ್ಕುಗಳನ್ನು ಹೊಂದಿದ್ದಾರೆ. ಅವುಗಳನ್ನು ವರ್ಗಾಯಿಸಲು ಅಥವಾ ಮಾರಾಟ ಮಾಡಲು ಸಾಧ್ಯವಾಗಲ್ಲ ಎಂದು ಅನುಷ್ಕಾ ಶರ್ಮಾ ಪರ ವಕೀಲ ದೀಪಕ್ ಬಾಪಟ್ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಲಾಗಿದೆ.
ಈ ಹಿಂದೆಯೂ ಅರ್ಜಿಗಳು ತಿರಸ್ಕರಿಸಿದ್ದ ಹೈಕೋರ್ಟ್:ಇದೇಮಾರಾಟ ತೆರಿಗೆ ವಿವಾದ ಪ್ರಕರಣದಲ್ಲಿ ಡಿಸೆಂಬರ್ನಲ್ಲಿ ಅನುಷ್ಕಾ ಶರ್ಮಾ ಹೈಕೋರ್ಟ್‌ಗೆ ಅರ್ಜಿ ಗಳನ್ನು ಸಲ್ಲಿಸಿದ್ದರು. ಆದರೆ, ಆಗ ಮಾರಾಟ ತೆರಿಗೆ ಇಲಾಖೆ ವಿರುದ್ಧ ನೇರವಾಗಿ ಅನುಷ್ಕಾ ತಮ್ಮ ಹೆಸರಲ್ಲಿ ಅರ್ಜಿಗಳನ್ನು ಸಲ್ಲಿಸಿರಲಿಲ್ಲ. ತಮ್ಮ ಸಲಹೆಗಾರರ ಮೂಲಕ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಬಗ್ಗೆ ಅಸಮಾಧಾನ ಹೊರ ಹಾಕಿದ್ದ ಉಚ್ಛ ನ್ಯಾಯಾಲಯವು ಈ ಅರ್ಜಿಗಳನ್ನು ವಜಾಗೊಳಿಸಿತ್ತು.
ಇದನ್ನೂ ಓದಿ:ಮತ್ತೆ ಟ್ರೋಲ್ಗೆ ಗುರಿಯಾದ ನಟಿ ದೀಪಿಕಾ : ಬಿಕಿನಿ ನಂತರ ಚಪ್ಪಲಿ ಫೋಟೋ ವೈರಲ್