ನವದೆಹಲಿ: ಮುಂಬರುವ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿದಿರುವ ಆಮ್ ಆದ್ಮಿ ಪಕ್ಷ ನಾಳೆ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಹೆಸರು ಘೋಷಣೆ ಮಾಡಲಿದೆ. ಇದಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾಹಿತಿ ನೀಡಿದ್ದಾರೆ.
ಪಂಜಾಬ್ ವಿಧಾನಸಭೆ ಚುನಾವಣೆಗಾಗಿ ಅಭ್ಯರ್ಥಿಗಳ ಹೆಸರುಗಳನ್ನು ಈಗಾಗಲೇ ಘೋಷಣೆ ಮಾಡಿರುವ ಎಎಪಿ, ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬೇಕು ಎಂಬ ನಿರ್ಧಾರವನ್ನು ಜನರಿಗೆ ಬಿಟ್ಟಿತ್ತು. ಅದಕ್ಕಾಗಿ ಪ್ರತ್ಯೇಕ ಮೊಬೈಲ್ ಸಂಖ್ಯೆ ನೀಡಿ, ತಮ್ಮಿಷ್ಟದ ಸಿಎಂ ಅಭ್ಯರ್ಥಿ ಹೆಸರು ಮೆಸೇಜ್ ಮಾಡುವಂತೆ ಮನವಿ ಮಾಡಲಾಗಿತ್ತು. ಇದೀಗ ಜನರ ಅಭಿಪ್ರಾಯದ ಪ್ರಕಾರ ಸಿಎಂ ಅಭ್ಯರ್ಥಿ ಯಾರೆಂಬುದನ್ನು ಕೇಜ್ರಿವಾಲ್ ಪ್ರಕಟಿಸಲಿದ್ದಾರೆ.
ಈ ಮೊದಲು ಪಂಜಾಬ್ನಲ್ಲಿ ಪಕ್ಷದ ಸಂಸದ ಭಗವಂತ್ ಮಾನ್ ಅವರನ್ನು ಸಿಎಂ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲು ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ, ಆ ಬಳಿಕ ನಡೆದ ವಿದ್ಯಮಾನಗಳಲ್ಲಿ ಸಿಎಂ ಅಭ್ಯರ್ಥಿಯನ್ನು ಜನರೇ ಗುರುತಿಸಲಿ ಎಂಬ ನಿರ್ಧಾರಕ್ಕೆ ಆಪ್ ಪಕ್ಷ ಬಂದಿತ್ತು.
ಇದನ್ನೂ ಓದಿರಿ:ಪಂಜಾಬ್ ವಿಧಾನಸಭೆ ಎಲೆಕ್ಷನ್ ಮುಂದೂಡಿಕೆ: ಹೊಸ ಡೇಟ್ ಘೋಷಿಸಿದ ಚು.ಆಯೋಗ
117 ವಿಧಾನಸಭೆ ಕ್ಷೇತ್ರಗಳಿಗೆ ಫೆ. 14ರಂದು ಮತದಾನ ನಿಗದಿ ಮಾಡಲಾಗಿತ್ತು. ಆದರೆ, ಗುರು ರವಿದಾಸ್ ಜಯಂತಿ ಇರುವ ಕಾರಣ ಇದೀಗ ಚುನಾವಣಾ ಆಯೋಗ ಫೆ. 20ಕ್ಕೆ ಚುನಾವಣೆ ಮುಂದೂಡಿದೆ. ಈ ಸಲದ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಪಕ್ಷ ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ, ಶಿರೋಮಣಿ ಅಕಾಲಿ ದಳ ಹಾಗೂ ಬಿಜೆಪಿ ಕಣದಲ್ಲಿವೆ.