ದಿಬ್ರುಗಢ (ಅಸ್ಸೋಂ):ಬಂಧಿತ ಖಲಿಸ್ತಾನ್ ಪ್ರತ್ಯೇಕತಾವಾದಿ ನಾಯಕ, ವಾರಿಸ್ ಪಂಜಾಬ್ ಡೇ ಮುಖ್ಯಸ್ಥ ಅಮೃತಪಾಲ್ ಸಿಂಗ್ ಸೇರಿದಂತೆ 10 ಆರೋಪಿಗಳ ಭೇಟಿಗಾಗಿ ಕುಟುಂಬ ಸದಸ್ಯರ ತಂಡ ಇಂದು ಪಂಜಾಬ್‌ನಿಂದ ಅಸ್ಸೋಂನ ದಿಬ್ರುಗಢಕ್ಕೆ ಬಂದಿದೆ. ಇಲ್ಲಿನ ಸೆಂಟ್ರಲ್ ಜೈಲಿನಲ್ಲಿ 10 ಆರೋಪಿಗಳನ್ನು ಇರಿಸಲಾಗಿದ್ದು, ಅವರನ್ನು ಕುಟುಂಬಸ್ಥರು ಭೇಟಿ ಮಾಡಲಿದ್ದಾರೆ. ಈ ತಂಡದಲ್ಲಿ ಶಿರೋಮಣಿ ಗುರುದ್ವಾರ ನಿರ್ವಹಣಾ ಸಮಿತಿಯ ಇಬ್ಬರು ಸದಸ್ಯರು ಕೂಡ ಇದ್ದಾರೆ.
ಇದನ್ನೂ ಓದಿ:ಖಲಿಸ್ತಾನ್ ಪ್ರತ್ಯೇಕತಾವಾದಿ ಅಮೃತ್ಪಾಲ್ ಸಿಂಗ್ ಬಂಧನ: ಅಸ್ಸೋಂ ಜೈಲಿಗೆ ಶಿಫ್ಟ್
ಖಲಿಸ್ತಾನ್ ಪರ ಒಲವು ಹೊಂದಿರುವ ಅಮೃತಪಾಲ್ ಸಿಂಗ್ ಬಂಧನಕ್ಕೆ ಪಂಜಾಬ್ ಸರ್ಕಾರ ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಸಿತ್ತು. ಮಾರ್ಚ್ 18ರಿಂದ ತಲೆ ಮರೆಸಿಕೊಂಡಿದ್ದ ಅಮೃತಪಾಲ್ ಕೊನೆಗೆ ಏಪ್ರಿಲ್ 23ರಂದು ಮೋಗಾ ಜಿಲ್ಲೆಯಲ್ಲಿ ಸೆರೆ ಸಿಕ್ಕಿದ್ದ. ನಂತರ ಆತನನ್ನು ಅಸ್ಸೋಂನ ದಿಬ್ರುಗಢ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ಇತರ ಬಂಧಿತ ಆರೋಪಿಗಳಾದ ಕುಲ್ವಂತ್ ಸಿಂಗ್ ಧಲಿವಾಲ್, ವೀರಿಂದರ್ ಸಿಂಗ್ ಜೋಹಾಲ್, ಗುರ್ಮೀತ್ ಸಿಂಗ್ ಬುಕನ್ವಾಲಾ, ಹರ್ಜಿತ್ ಸಿಂಗ್ ಖೈರಾ, ಭಗವಂತ್ ಸಿಂಗ್ ಬಜೆಕೆ, ಬಸಂತ್ ಸಿಂಗ್, ಗುರಿಂದರ್ ಪಾಲ್ ಸಿಂಗ್ ಮತ್ತು ಪಾಪಲ್ಪ್ರೀತ್ ಸಿಂಗ್ನನ್ನು ಸಹ ದಿಬ್ರುಗಢ ಜೈಲಿನಲ್ಲಿ ಇರಿಸಲಾಗಿದೆ.
ಇದನ್ನೂ ಓದಿ:ಖಲಿಸ್ತಾನ್ ಬೆಂಬಲಿತ ಅಮೃತಪಾಲ್ ಸಿಂಗ್ಗೆ ಪಾಕಿಸ್ತಾನದಿಂದ ಹಣದ ನೆರವು ಶಂಕೆ
ಈ ಬಂಧಿತ ಆರೋಪಿಗಳ ಭೇಟಿಗಾಗಿ ಕುಟುಂಬ ಸದಸ್ಯರು ದಿಬ್ರುಗಢಕ್ಕೆ ಆಗಮಿಸಿದ್ದಾರೆ. ಅಮೃತಸರದಿಂದ ದೆಹಲಿ ಮೂಲಕ ದಿಬ್ರುಗಢ ವಿಮಾನ ನಿಲ್ದಾಣಕ್ಕೆ ಕುಟುಂಬಸ್ಥರು ಬಂದಿಳಿದಿದ್ದಾರೆ. ಈ ತಂಡದಲ್ಲಿ ಅಮೃತಪಾಲ್ ಸಿಂಗ್ ತಂದೆ, ಶಿರೋಮಣಿ ಗುರುದ್ವಾರ ನಿರ್ವಹಣಾ ಸಮಿತಿಯ ಇಬ್ಬರು ಸದಸ್ಯರು ಇದ್ದು, ಜೈಲಿನಲ್ಲಿ ಭೇಟಿಯಾಗಲು ಅನುಮತಿ ಕೊಡಲಾಗಿದೆ. ಇದರ ನಡುವೆ ಪೊಲೀಸರು ದಿಬ್ರುಗಢ ಕೇಂದ್ರ ಕಾರಾಗೃಹದಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದಾರೆ. ಜೈಲಿನ ಬಳಿ ಯಾವುದೇ ಪ್ರಯಾಣಿಕರ ವಾಹನಗಳನ್ನು ನಿಲ್ಲಿಸಲು ಪೊಲೀಸರು ಅವಕಾಶ ನೀಡಿಲ್ಲ.
ಬೀಡುಬಿಟ್ಟ ಪಂಜಾಬ್ ಪೊಲೀಸರು: ಮತ್ತೊಂದೆಡೆ, ಅಮೃತಪಾಲ್ ಸ್ಥಳಾಂತರಕ್ಕಾಗಿ ಬಂದ ದಿಬ್ರುಗಢಕ್ಕೆ ಬಂದ 16 ಸದಸ್ಯರ ಪಂಜಾಬ್ ಪೊಲೀಸ್ ತಂಡ ಕೂಡ ದಿಬ್ರುಗಢದಲ್ಲಿ ಬೀಡುಬಿಟ್ಟಿದೆ. ಪ್ರತಿದಿನ ಅಮೃತಪಾಲ್ ಸಿಂಗ್ ಮತ್ತು ಇತರ ಒಂಬತ್ತು ಖಲಿಸ್ತಾನಿ ಪರ ನಾಯಕರನ್ನು ವಿಚಾರಣೆ ನಡೆಸುತ್ತಿದೆ. ಅಲ್ಲದೇ, ದೆಹಲಿ ಇಂಟಲಿಜೆನ್ಸ್ ಬ್ಯೂರೋ (ಐಬಿ)ಯ ನಾಲ್ಕು ಸದಸ್ಯರ ತಂಡ ಕೂಡ ಬಂಧಿತ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದೆ. ಎಲ್ಲ ಆರೋಪಿಗಳನ್ನು ತನಿಖಾ ಅಧಿಕಾರಿಗಳು ಹಲವು ಆಯಾಮಗಳಲ್ಲಿ ಗಂಟೆಗಳ ಕಾಲ ವಿಚಾರಣೆ ನಡೆಸುತ್ತಿದ್ದಾರೆ.
69 ಹೊಸ ಸಿಸಿ ಕ್ಯಾಮರಾ ಅವಳಡಿಕೆ: ಅಮೃತಪಾಲ್ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಐಸಿಸ್ನೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪವೂ ಇದೆ. ಇತ್ತೀಚೆಗೆ ಅಂತಾರಾಷ್ಟ್ರೀಯ ಫೋರಂ ಫಾರ್ ರೈಟ್ಸ್ ಅಂಡ್ ಸೆಕ್ಯುರಿಟಿ ವಿಶೇಷ ವರದಿಯನ್ನು ಪ್ರಕಟಿಸಿದ್ದು, ಅಮೃತಪಾಲ್ ಮೂಲಕ ಐಎಸ್‌ಐ ಮತ್ತೊಮ್ಮೆ ಪಂಜಾಬ್‌ನಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪ ಕೇಳಿ ಬಂದಿದೆ. ಅಸ್ಸೋಂನ ಕಾರಾಗೃಹದ ಅಧಿಕಾರಿಗಳು ಅಮೃತಪಾಲ್ ಮತ್ತು ಬಂಧಿತ ಸಹಚರರ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಜೈಲಿನಲ್ಲಿ 69 ಹೊಸ ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದಾರೆ.
ಇದನ್ನೂ ಓದಿ:ಅಮೃತಪಾಲ್ ಸಿಂಗ್ ಬಂಧಿಸುವವರೆಗೂ ಇಡೀ ರಾತ್ರಿ ನಿದ್ದೆ ಮಾಡಲಿಲ್ಲ: ಪಂಜಾಬ್ ಸಿಎಂ ಭಗವಂತ್ ಮಾನ್