ಕರ್ನಾಟಕ

karnataka

ETV Bharat / bharat

2014 ರಿಂದ 62 ಯುವಕರು ISIS ಸೇರ್ಪಡೆ; ಶೇ 95 ರಷ್ಟು ಮಂದಿ ದಕ್ಷಿಣ ಭಾರತೀಯರು: ಕೇಂದ್ರ ಸರ್ಕಾರ - ಇಸ್ಲಾಮಿಕ್ ಭಯೋತ್ಪಾದಕ ಗುಂಪು ಐಸಿಸ್

2014 ರಿಂದ ಭಾರತದ 62 ಯುವಕರು ಇಸ್ಲಾಮಿಕ್ ಭಯೋತ್ಪಾದಕ ಗುಂಪು ಐಸಿಸ್ ಸೇರಿದ್ದಾರೆ. ಅವರಲ್ಲಿ 95 ಪ್ರತಿಶತ ದಕ್ಷಿಣ ಭಾರತದ ರಾಜ್ಯಗಳಿಂದ ಬಂದವರು ಎಂದು ಹಿರಿಯ ಅಧಿಕಾರಿಯೊಬ್ಬರು 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ್ದಾರೆ.

Representative image
ಪ್ರಾತಿನಿಧಿಕ ಚಿತ್ರ

By

Published : May 5, 2023, 12:21 PM IST

ನವದೆಹಲಿ: 'ದಿ ಕೇರಳ ಸ್ಟೋರಿ' ಭಾರತದಾದ್ಯಂತ ಭಾರಿ ವಿವಾದ ಹುಟ್ಟುಹಾಕಿದೆ. ಈ ನಡುವೆ 2014 ರಿಂದ ಭಾರತದಲ್ಲಿ 62 ಯುವಕರು ಇಸ್ಲಾಮಿಕ್ ಭಯೋತ್ಪಾದಕ ಗುಂಪು ಐಸಿಸ್‌ ಸೇರಿದ್ದಾರೆ ಎಂದು ಸರ್ಕಾರದ ಅಂಕಿಅಂಶಗಳು ತಿಳಿಸಿವೆ. ಸರ್ಕಾರದ ಅಂಕಿಅಂಶಗಳನ್ನು ಉಲ್ಲೇಖಿಸಿ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ್ದಾರೆ. ಐಸಿಸ್‌ನೊಂದಿಗೆ ಸಂಪರ್ಕ ಹೊಂದಿರುವ 68 ಭಾರತೀಯರು ವಿದೇಶದಲ್ಲಿ ನೆಲೆಸಿದ್ದಾರೆ. ಮುಖ್ಯವಾಗಿ ಅವರಲ್ಲಿ 95 ಪ್ರತಿಶತ ದಕ್ಷಿಣ ಭಾರತದ ರಾಜ್ಯಗಳಿಂದ ಬಂದವರು. ತನಿಖಾ ಸಂಸ್ಥೆಗಳು ದಾಖಲಿಸಿರುವ ಸಂಖ್ಯೆ ಇದಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

300 ಜನರ ಬಂಧನ: ಅನೇಕ ಪ್ರಕರಣಗಳು ದಾಖಲಾಗದಿದ್ದರೂ, ಈ ಸಂಖ್ಯೆ ಇನ್ನೂ ಹೆಚ್ಚಿರಬಹುದು. ನಿರಂತರ ಕಣ್ಗಾವಲು ಮತ್ತು ಮುನ್ನೆಚ್ಚರಿಕಾ ಕ್ರಮಗಳಿಂದ ಐಸಿಸ್ ಅಥವಾ ಅದರ ಅಂಗಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿದ್ದಕ್ಕಾಗಿ ಭಾರತದ ಭದ್ರತಾ ಏಜೆನ್ಸಿಗಳು ಈವರೆಗೆ ಸುಮಾರು 300 ಜನರನ್ನು ಬಂಧಿಸಿವೆ.

ಕೇರಳದ 32 ಸಾವಿರ ಮಹಿಳೆಯರು ಭಯೋತ್ಪಾದಕ ಗುಂಪು ಐಸಿಸ್‌ಗೆ ಸೇರಿದ್ದಾರೆ ಎಂದು 'ದಿ ಕೇರಳ ಸ್ಟೋರಿ' ನಿರ್ಮಾಪಕರು ಈ ಹಿಂದೆ ಹೇಳಿದ್ದರು. ಆದರೆ ಇದೀಗ ಅದರ ಸಂಖ್ಯೆಯನ್ನು 3ಕ್ಕೆ ಬದಲಾಯಿಸಲಾಗಿದೆ. ತೀವ್ರ ಟೀಕೆಗಳ ನಂತರ ಈ ಬದಲಾವಣೆ ಮಾಡಲಾಗಿದೆ. ಆನ್‌ಲೈನ್ ಆಮೂಲಾಗ್ರೀಕರಣವು ಯುವಕರು ಭಯೋತ್ಪಾದಕ ಸಂಘಟನೆಗಳಿಗೆ ಸೇರಲು ಕಾರಣವಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಐಸಿಸ್ ಅಥವಾ ಇತರ ಭಯೋತ್ಪಾದಕ ಸಂಘಟನೆಗಳು, ಯುವಕರನ್ನು ಆನ್‌ಲೈನ್‌ನಲ್ಲಿ ನೇಮಿಸಿಕೊಳ್ಳಲಾಗುತ್ತದೆ. ನಂತರ ಸಕ್ರಿಯವಾಗಿ ಸೇರಲು ವಿದೇಶಗಳಿಗೆ, ವಿಶೇಷವಾಗಿ ಅಫ್ಘಾನಿಸ್ತಾನಕ್ಕೆ ಕಳುಹಿಸಲಾಗುತ್ತದೆ ಎಂದು ಅವರು ಹೇಳಿದರು.

ಟ್ವಿಟರ್, ಫೇಸ್‌ಬುಕ್, ಟೆಲಿಗ್ರಾಂ ಮತ್ತು ಯೂಟ್ಯೂಬ್ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮ ವೆಬ್‌ಸೈಟ್‌ಗಳ ಮೂಲಕ ನೇಮಕ ಮಾಡಲಾಗುತ್ತಿದೆ ಎಂದು ಎನ್‌ಐಎ ತನಿಖೆಯಲ್ಲಿ ಪತ್ತೆಯಾಗಿದೆ. ಆರಂಭದಲ್ಲಿ ಭಯೋತ್ಪಾದಕ ಸಂಘಟನೆಯು ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಟ್ವಿಟರ್ ಮೂಲಕ ಯುವಕರೊಂದಿಗೆ ಸಂಪರ್ಕ ಸಾಧಿಸುತ್ತದೆ. ಯುವಕರು ಆಮೂಲಾಗ್ರೀಕರಣಗೊಂಡ ನಂತರ, ಟೆಲಿಗ್ರಾಮ್‌ನಂತಹ ಎನ್‌ಕ್ರಿಪ್ಟೆಡ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಅವರನ್ನು ಸಂಪರ್ಕಿಸಲಾಗುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ನಾಲ್ವರ ವಿರುದ್ಧ ರೆಡ್ ಕಾರ್ನರ್ ನೋಟಿಸ್:ಕೇರಳ ಮೂಲದ ನಾಲ್ವರು ಮಹಿಳೆಯರ ವಿರುದ್ಧ ಈಗಾಗಲೇ ರೆಡ್ ಕಾರ್ನರ್ ನೋಟಿಸ್(ರೆಡ್ ಕಾರ್ನರ್ ನೋಟಿಸ್ ಎಂಬುದು ಪರಾರಿಯಾದವರನ್ನು ಪತ್ತೆಹಚ್ಚಲು ಮತ್ತು ತಾತ್ಕಾಲಿಕವಾಗಿ ಬಂಧಿಸಲು ವಿಶ್ವಾದ್ಯಂತ ಪೊಲೀಸ್ ಪಡೆಗಳಿಗೆ ಮಾಡುವ ವಿನಂತಿ) ಜಾರಿ ಮಾಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಈ ಮಹಿಳೆಯರನ್ನು ಸೋನಿಯಾ ಸೆಬಾಸ್ಟಿಯನ್, ಶಂಸಿಯಾ ಕುರಿಯಾ, ರಫೇಲಾ ಮತ್ತು ಫಾತಿಮಾ ಇಸಾ ಎಂದು ಗುರುತಿಸಲಾಗಿದೆ. ಇವರು ಭಾರತಕ್ಕೆ ಮರಳುವ ಯಾವುದೇ ಸಾಧ್ಯತೆಯನ್ನು ಅಧಿಕಾರಿ ತಳ್ಳಿಹಾಕಿದ್ದಾರೆ. ಕೆಲ ವರ್ಷಗಳ ಹಿಂದೆ ಅವರು ಐಸಿಸ್ ಸೇರಿದ್ದರು. ಅಫ್ಘಾನಿಸ್ತಾನದ ವಿವಿಧ ಘಟನೆಗಳಲ್ಲಿ ಅವರು ಪ್ರಸ್ತುತ ಜೈಲು ಸೇರಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಭಯೋತ್ಪಾದಕ ಸಂಘಟನೆಯ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇಡುತ್ತಿದ್ದೇವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಕೇರಳ ಜನರನ್ನು ಕೆಣಕುವ ಯತ್ನ: ಏತನ್ಮಧ್ಯೆ, ಈಟಿವಿ ಭಾರತದೊಂದಿಗೆ ಮಾತನಾಡಿದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಸಂಸದ ಬಿನೋಯ್ ವಿಶ್ವಂ, 'ಕೇರಳದ ಕಥೆಯು ಆಧಾರರಹಿತ. ನಕಲಿ ಸುದ್ದಿಗಳು ಮತ್ತು ಇಸ್ಲಾಮೋಫೋಬಿಕ್ ಪ್ರಚಾರದಿಂದ ತುಂಬಿದೆ. ಇದು ಕೇರಳ ಮತ್ತು ಅಲ್ಲಿನ ಜನರ ಚಿತ್ರಣವನ್ನು ಕೆಡಿಸುವ ಉದ್ದೇಶ ಹೊಂದಿದೆ. ಚಿತ್ರದ ಅಧಿಕೃತ ಟ್ರೇಲರ್ ಕೇರಳ ಮತ್ತು ಮುಸ್ಲಿಂ ಸಮುದಾಯದ ವಿರುದ್ಧ ರಾಜಕೀಯ ಪ್ರೇರಿತ ದ್ವೇಷದ ಅಭಿಯಾನವೇ ಹೊರತು ಬೇರೇನೂ ಅಲ್ಲ' ಎಂದು ವಿಶ್ವಂ ಹೇಳಿದ್ದಾರೆ.

ಚಿತ್ರವು ಉದ್ದೇಶಪೂರ್ವಕವಾಗಿ ಕೇರಳದ ಆಗಿನ ಮುಖ್ಯಮಂತ್ರಿಗಳಾದ ವಿ.ಎಸ್.ಅಚ್ಚುದನಾಥನ್ ಮತ್ತು ಉಮ್ಮನ್ ಚಾಂಡಿ ಅವರ ಹೇಳಿಕೆಗಳನ್ನು ತಪ್ಪಾಗಿ ನಿರೂಪಿಸುತ್ತದೆ. 'ಆಗಿನ ಗೃಹ ಖಾತೆಯ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ ಅವರ ಹಳೆಯ ಹೇಳಿಕೆಯನ್ನು ಉಲ್ಲೇಖಿಸಿದ ಸಿಪಿಐ ನಾಯಕ 'ಲವ್ ಜಿಹಾದ್' ಧ್ರುವೀಕರಣದ ಗುರಿಯನ್ನು ಹೊಂದಿರುವ ಆಧಾರರಹಿತ ಇಸ್ಲಾಮೋಫೋಬಿಕ್ ಪಿತೂರಿ ಸಿದ್ಧಾಂತವಾಗಿದೆ ಎಂದು ಹೇಳಿದರು.

ಯಾವುದೇ ಲವ್ ಜಿಹಾದ್ ಪ್ರಕರಣಗಳು ಮುನ್ನೆಲೆಗೆ ಬಂದಿಲ್ಲ ಎಂದು ಜಿ ಕಿಶನ್ ರೆಡ್ಡಿ ಅವರು ಫೆಬ್ರವರಿ 5, 2020 ರಂದು ಸಂಸತ್ತಿಗೆ ತಿಳಿಸಿದ್ದರು ಎಂದು ಬಿನೋಯ್ ವಿಶ್ವಂ ಹೇಳಿದ್ದಾರೆ. ಹೀಗಾಗಿ ಕೇರಳ ಸ್ಟೋರಿಯು ಪ್ರಚಾರ ಮಾಡಿದ ಕಥೆಯು ಸ್ಪಷ್ಟವಾಗಿ ಸುಳ್ಳು ಮತ್ತು ಸತ್ಯಗಳ ವಿರೂಪವನ್ನು ಆಧರಿಸಿದೆ ಮತ್ತು ದ್ವೇಷವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಮತ್ತೊಬ್ಬ ಸಿಪಿಐ ನಾಯಕ ಕೂಡ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರಿಗೆ ಪತ್ರ ಬರೆದು ಚಿತ್ರದ ಮೂಲಕ ಸುಳ್ಳು ಹೇಳಿಕೆಗಳನ್ನು ನೀಡುತ್ತಿರುವ ಬಗ್ಗೆ ತನಿಖೆಯನ್ನು ಪ್ರಾರಂಭಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ:"ದಿ ಕೇರಳ ಸ್ಟೋರಿ" ಮೂವರು ಯುವತಿಯರ ನೈಜ ಕಥೆ ಆಧರಿಸಿದೆ; ಟ್ರೇಲರ್‌ನ ವಿವರಣೆ ಬದಲಾಯಿಸಿದ ಚಿತ್ರತಂಡ

ABOUT THE AUTHOR

...view details