ನವದೆಹಲಿ: ಬ್ಯಾಂಕ್ ಸಿಬ್ಬಂದಿಯ ಹೆಸರಲ್ಲಿ ಫೋನ್ ಮಾಡಿ ಓಟಿಪಿ ಹಾಗೂ ಇತರ ವಿವರಗಳನ್ನು ಪಡೆದು ಗ್ರಾಹಕರ ಖಾತೆಯಿಂದ ಹಣ ಎಗರಿಸುವ ಜಾರ್ಖಂಡ್ನ ಜಾಮ್ತಾರಾದ ಮಹಾವಂಚಕರ ಜಾಲವೊಂದನ್ನು ದೆಹಲಿ ಪೊಲೀಸರು ಭೇದಿಸಿದ್ದಾರೆ. ಜಾಮ್ತಾರಾ ವಂಚಕ ಗ್ಯಾಂಗ್ನ ಆರು ಸದಸ್ಯರನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಅವರಿಂದ ಸುಮಾರು 22,000 ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಜಾಮ್ತಾರಾ ನಿವಾಸಿಗಳಾದ ನಿಜಾಮುದ್ದೀನ್ ಅನ್ಸಾರಿ ಅಲಿಯಾಸ್ ನಿಜಾಮ್ (23 ವರ್ಷ), ಅಫ್ರೋಜ್ ಆಲಂ (23 ವರ್ಷ), ಎಂಡಿ ಅಮೀರ್ ಅನ್ಸಾರಿ (22 ವರ್ಷ), ಸರ್ಫರಾಜ್ ಅನ್ಸಾರಿ (22 ವರ್ಷ), ಅಫ್ರೋಜ್ ಅನ್ಸಾರಿ (22 ವರ್ಷ) ಮತ್ತು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ನಿವಾಸಿ ನಾಸಿಮ್ ಮಲಿತ್ಯ (31 ವರ್ಷ) ಎಂದು ಗುರುತಿಸಲಾಗಿದೆ.
10 ಲಕ್ಷ ರೂ. ವಂಚನೆಗೊಳಗಾದ ವ್ಯಕ್ತಿಯೊಬ್ಬರು ನೀಡಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಪೊಲೀಸರ ಪ್ರಕಾರ, ಪ್ರಸ್ತುತ ದುಬೈನಲ್ಲಿ ನೆಲೆಸಿರುವ ದೂರುದಾರರು ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಮಗಳನ್ನು ಭೇಟಿ ಮಾಡಲು ದೆಹಲಿಗೆ ಬಂದಿದ್ದರು ಮತ್ತು ತಮ್ಮ ಬ್ಯಾಂಕ್ ಪಾಸ್‌ಬುಕ್ ಅನ್ನು ನವೀಕರಿಸಲು ಬಯಸಿದ್ದರು. ಇದಕ್ಕಾಗಿ ಆನ್ ಲೈನ್ ನಲ್ಲಿ ಅವರು ಕಸ್ಟಮರ್ ಕೇರ್ ನಂಬರ್ ಹುಡುಕಿದ್ದಾರೆ. ಗೂಗಲ್ನಲ್ಲಿ ಸಿಕ್ಕಿದ ಕಸ್ಟಮರ್ ಕೇರ್ ನಂಬರ್ಗೆ ಅವರು ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ಆ ಕಡೆಯ ವ್ಯಕ್ತಿಯು ಬ್ಯಾಂಕ್ ಸಿಬ್ಬಂದಿಯಂತೆಯೇ ಮಾತನಾಡಿದ್ದಾನೆ ಮತ್ತು ಹೆಚ್ಚಿನ ಸಹಾಯಕ್ಕಾಗಿ ಪ್ಲೇ ಸ್ಟೋರ್‌ನಿಂದ 'SBI Anydesk' ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲು ದೂರುದಾರರಿಗೆ ಮನವರಿಕೆ ಮಾಡಿದ್ದಾನೆ. ಆ್ಯಪ್ ಡೌನ್ಲೋಡ್ ಮಾಡುವ ಲಿಂಕ್ ಅನ್ನು WhatsApp ಮೂಲಕ ಕಳುಹಿಸಿದ್ದಾನೆ. ಆತ ತನ್ನನ್ನು ತಾನು ಎಸ್‌ಬಿಐ ಕಸ್ಟಮರ್ ಕೇರ್ ಸಿಬ್ಬಂದಿ ಎಂದು ಆತ ಹೇಳಿಕೊಂಡಿದ್ದಾನೆ ಉಪ ಪೊಲೀಸ್ ಆಯುಕ್ತ ರವಿಕುಮಾರ್ ಸಿಂಗ್ ಹೇಳಿದ್ದಾರೆ.
ನಂತರ ವಂಚಕನು ಅವರ ನೆಟ್ ಬ್ಯಾಂಕಿಂಗ್ ಖಾತೆಗೆ ಲಾಗ್ ಇನ್ ಮಾಡಲು ಕೇಳಿದ್ದಾನೆ. ನಂತರ ಆ ವ್ಯಕ್ತಿಯು ಬ್ಯಾಂಕಿನ ಹಿರಿಯ ಅಧಿಕಾರಿ ಎಂದು ಹೇಳಿಕೊಂಡ ಮತ್ತೊಬ್ಬ ವ್ಯಕ್ತಿಗೆ ಕರೆ ಫಾರ್ವರ್ಡ್ ಮಾಡಿದ್ದಾನೆ. ಇದರ ನಂತರ ರಿಮೋಟ್ ಮೂಲಕ ವಂಚಕರು ಗ್ರಾಹಕರ ಮೊಬೈಲ್ ಫೋನ್‌ಗೆ ಪ್ರವೇಶ ಪಡೆದು ಅವರ ಎಸ್‌ಬಿಐ ಖಾತೆಯಿಂದ 9,50,000 ಮತ್ತು 50,000 ರೂ.ಗಳ ಎರಡು ಅನಧಿಕೃತ ವಹಿವಾಟುಗಳನ್ನು ಮಾಡಿದ್ದಾರೆ ಎಂದು ಅವರು ಹೇಳಿದರು. ತನಿಖೆಯ ಸಮಯದಲ್ಲಿ ಕರೆ ಮಾಡಲಾದ ಫೋನ್ ಸಂಖ್ಯೆಗಳ ಕರೆ ವಿವರಗಳ ದಾಖಲೆ, ಹಣ ಸಾಗಿದ ಮೂಲಗಳನ್ನು ತನಿಖೆ ಮಾಡಲಾಯಿತು ಮತ್ತು SBI ಮತ್ತು ಬಿಲ್‌ಡೆಸ್ಕ್ ಪಾವತಿ ಗೇಟ್‌ವೇಯಿಂದ ವಿವರಗಳನ್ನು ಪಡೆಯಲಾಯಿತು.