ಪೂಂಚ್, ಜಮ್ಮು-ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಬುಫ್ಲಿಯಾಜ್ ಪ್ರದೇಶದಲ್ಲಿ ಗುರುವಾರ ಮಧ್ಯಾಹ್ನ 3:45 ಕ್ಕೆ ಭಾರಿ ಶಸ್ತ್ರಸಜ್ಜಿತ ಭಯೋತ್ಪಾದಕರು ಎರಡು ಸೇನಾ ವಾಹನಗಳ ಮೇಲೆ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಮೂವರು ಯೋಧರು ಸ್ಥಳದಲ್ಲೇ ಹುತಾತ್ಮರಾಗಿದ್ದರು. ಈಗ ಮತ್ತಿಬ್ಬರ ಯೋಧರು ಚಿಕಿತ್ಸೆ ಫಲಿಸದೇ ಹುತಾತ್ಮರಾಗಿದ್ದಾರೆ.
ಘಟನೆಯಲ್ಲಿ ಕೆಲ ಯೋಧರು ಗಾಯಗೊಂಡಿದ್ದು, ಚಿಕಿತ್ಸೆ ಮುಂದುವರಿದಿದೆ. ಸೇನಾ ವಾಹನಗಳನ್ನು ಗುರಿಯಾಗಿಸಿಕೊಂಡಿದ್ದ ಉಗ್ರರು ಗ್ರೆನೇಡ್ ದಾಳಿ ಮಾಡಿದರು. ಬಳಿಕ ಮನಬಂದಂತೆ ಗುಂಡು ಹಾರಿಸಿದ್ದರು. ಈ ನಡೆದ ಉಗ್ರ ದಾಳಿಯಲ್ಲಿ ಇಬ್ಬರು ಸೈನಿಕರ ದೇಹ ಛಿದ್ರಗೊಂಡಿವೆ. ಪಾಕಿಸ್ತಾನ ಬೆಂಬಲಿತ ಪೀಪಲ್ಸ್ ಆ್ಯಂಟಿ ಫ್ಯಾಸಿಸ್ಟ್ ಫ್ರಂಟ್ (ಪಿಎಎಫ್‌ಎಫ್) ದಾಳಿಯ ಹೊಣೆ ಹೊತ್ತುಕೊಂಡಿದೆ.
ದಾಳಿಯ ನಂತರ ಎಚ್ಚೆತ್ತ ಸೈನಿಕರು ಉಗ್ರರಿಗೆ ತಕ್ಕ ಉತ್ತರ ನೀಡಿದರು. ತಡರಾತ್ರಿಯವರೆಗೂ ಎನ್ಕೌಂಟರ್ ಮುಂದುವರೆಯಿತು. ರಾತ್ರಿಯ ನಂತರವೂ ಭಯೋತ್ಪಾದಕರು ಸ್ಥಳದಿಂದ ತಪ್ಪಿಸಿಕೊಳ್ಳದಂತೆ ಸೇನೆ ಇಡೀ ಪ್ರದೇಶವನ್ನು ಸುತ್ತುವರಿದಿದೆ. ಸೇನಾ ಕಾರ್ಯಾಚರಣೆ ಮುಂದುವರಿದಿದೆ.
ಮಾಹಿತಿ ಪ್ರಕಾರ, 48 ರಾಷ್ಟ್ರೀಯ ರೈಫಲ್ಸ್‌ನ ಎರಡು ವಾಹನಗಳು ಬುಫ್ಲಿಯಾಜ್‌ನಿಂದ ಧೇರಾ ಕಿ ಗಲಿ ಬರುತ್ತಿದ್ದವು. ಅವುಗಳಲ್ಲಿ ಒಂದು ಜಿಪ್ಸಿ ಮತ್ತು ಇನ್ನೊಂದು ಟ್ರಕ್ ಆಗಿತ್ತು. ರಾಜೌರಿ-ತನ್ನಮಂಡಿ-ಸುರನ್‌ಕೋಟೆ ರಸ್ತೆಯ ಸವಾನಿ ಎಂಬಲ್ಲಿ ಹೊಂಚು ಹಾಕಿ ಕುಳಿತಿದ್ದ ಉಗ್ರರು ಮೊದಲು ಗ್ರೆನೇಡ್ ದಾಳಿ ನಡೆಸಿದ್ದಾರೆ. ಎರಡೂ ವಾಹನಗಳನ್ನು ನಿಲ್ಲಿಸಿದ ತಕ್ಷಣ ಉಗ್ರರು ಎಲ್ಲ ಕಡೆಯಿಂದ ಸುತ್ತುವರಿದು ಮನಬಂದಂತೆ ಗುಂಡು ಹಾರಿಸತೊಡಗಿದರು. ಭಯೋತ್ಪಾದಕರ ಸಂಖ್ಯೆ ನಾಲ್ಕರಿಂದ ಆರು ಎಂದು ಹೇಳಲಾಗಿದೆ. ಬುಧವಾರ ರಾತ್ರಿಯಿಂದ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆ ನಡೆಯುತ್ತಿರುವ ಪ್ರದೇಶಕ್ಕೆ ಸೈನಿಕರನ್ನು ಸೇನಾ ವಾಹನದಲ್ಲಿ ಕರೆತರಲಾಗುತ್ತಿದೆ ಎಂದು ಜಮ್ಮುವಿನ ಸೇನಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಸುನಿಲ್ ಬರ್ತ್ವಾಲ್ ತಿಳಿಸಿದ್ದಾರೆ.
ಸ್ಥಳದಲ್ಲಿ ರಕ್ತಪಾತ: ಸ್ಥಳದಿಂದ ಭೀಕರ ದೃಶ್ಯಗಳು ಕಂಡು ಬಂದಿವೆ. ಎಲ್ಲೆಡೆ ರಕ್ತ ಹರಡಿ, ಸೈನಿಕರ ಒಡೆದ ಹೆಲ್ಮೆಟ್‌ಗಳು ಮತ್ತು ಎರಡೂ ಸೇನಾ ವಾಹನಗಳ ಒಡೆದ ಗಾಜುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಇಡೀ ಪ್ರದೇಶದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.
ಹುತಾತ್ಮರಾದ ಸೈನಿಕರು:ದಾಳಿಯಲ್ಲಿ ಹುತಾತ್ಮರಾದ ಸೈನಿಕರನ್ನು ನಾಯಕ್ ಬೀರೇಂದ್ರ ಸಿಂಗ್ (15 ಗರ್ವಾಲ್ ರೈಫಲ್), ನಾಯಕ್ ಕರಣ್ ಕುಮಾರ್ (ಎಎಸ್‌ಸಿ), ರೈಫಲ್‌ಮ್ಯಾನ್ ಚಂದನ್ ಕುಮಾರ್ (89 ಸಶಸ್ತ್ರ ರೆಜಿಮೆಂಟ್) ಮತ್ತು ರೈಫಲ್‌ಮ್ಯಾನ್ ಗೌತಮ್ ಕುಮಾರ್ (89 ಸಶಸ್ತ್ರ ರೆಜಿಮೆಂಟ್) ಎಂದು ಗುರುತಿಸಲಾಗಿದೆ. ಆದ್ರೆ ಐದನೇ ಹುತಾತ್ಮ ಯೋಧನ ಹೆಸರನ್ನು ಸೇನೆ ಸದ್ಯ ಬಿಡುಗಡೆ ಮಾಡಿಲ್ಲ.
ಓದಿ:ಕೊಡಗು ಪೊಲೀಸ್ ಇಲಾಖೆಯಲ್ಲಿ ಸಿಂಹದಂತೆ ಕಾರ್ಯನಿರ್ವಹಿಸುತ್ತಿದ್ದ ಲಿಯೋ ಶ್ವಾನ ಸಾವು