ಪೂಂಚ್ (ಜಮ್ಮು ಮತ್ತು ಕಾಶ್ಮೀರ):ಅಕ್ರಮವಾಗಿ ಗಡಿ ನುಸುಳಲು ಯತ್ನಿಸಿದ ಮೂವರು ಭಯೋತ್ಪಾದಕರನ್ನು ಸೇನಾಪಡೆ ಕಾರ್ಯಾಚರಣೆ ನಡೆಸಿ ಮಂಗಳವಾರ ಮಧ್ಯರಾತ್ರಿ ಬಂಧಿಸಿದೆ. ಪೂಂಚ್ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆಯನ್ನು ದಾಟುತ್ತಿದ್ದಾಗ ಭಾರತೀಯ ಯೋಧರು ದಾಳಿ ಮಾಡಿದ್ದರು.
ಮಳೆ ಮತ್ತು ಕೆಟ್ಟ ಹವಾಮಾನ ಲಾಭ ಪಡೆದು ಮೇ 30- 31 ರ ಮಧ್ಯರಾತ್ರಿ ಪೂಂಚ್ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆಯ ಬೇಲಿಯನ್ನು ಉಗ್ರರು ಅಕ್ರಮವಾಗಿ ದಾಟುತ್ತಿದ್ದರು. ಇದರ ಸುಳಿವು ಸಿಕ್ಕ ತಕ್ಷಣವೇ ಯೋಧರು ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆಗಿಳಿದಿದೆ. ಉಗ್ರರ ಮೇಲೆ ಗುಂಡಿನ ದಾಳಿ ನಡೆಸಿದೆ. 3- 4 ಭಯೋತ್ಪಾದಕರು ಗಡಿ ದಾಟಲು ಯತ್ನಿಸುತ್ತಿದ್ದರು ಎನ್ನಲಾಗಿದೆ.
ಮಧ್ಯರಾತ್ರಿ ಒಂದೂವರೆ ಸುಮಾರಿನಲ್ಲಿ ಉಗ್ರರು ತಮ್ಮ ಕೈಚಳಕ ತೋರಿಸುತ್ತಿದ್ದರು. ಗಡಿ ಬೇಲಿಯನ್ನು ಕಟ್ ಮಾಡಿ ಒಳನುಸುಳಲು ಯತ್ನಿಸುತ್ತಿದ್ದರು. ವಿಷಯ ತಿಳಿದ ಯೋಧರು ಅವರ ಮೇಲೆ ಗುಂಡು ಹಾರಿಸಿದರು. ಕೀಚಕರು ಕೂಡ ಪ್ರತಿದಾಳಿ ನಡೆಸಿದರು. ಗುಂಡಿನ ಚಕಮಕಿಯಲ್ಲಿ ಭಯೋತ್ಪಾದಕರು ಗಾಯಗೊಂಡರು. ನಂತರ ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರೆದು, ಶೋಧ ಕಾರ್ಯಾಚರಣೆ ನಡೆಸಿದಾಗ ಮೂವರು ಸಿಕ್ಕಿಬಿದ್ದರು ಎಂದು ತಿಳಿಸಿದೆ.
ಒಳನುಸುಳಲು ಯತ್ನಿಸಿದ ಸ್ಥಳದಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ. ಐಇಡಿ ಮತ್ತು ಮಾದಕ ವಸ್ತು ಸೇರಿದಂತೆ ಕೆಲ ಶಸ್ತ್ರಾಸ್ತ್ರಗಳ ಸಮೇತ ಮೂವರು ಭಯೋತ್ಪಾದಕರನ್ನು ಬಂಧಿಸಲಾಗಿದೆ. ಉಗ್ರರ ಗುಂಡಿನ ದಾಳಿಯಲ್ಲಿ ಓರ್ವ ಭಾರತೀಯ ಯೋಧ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಭಯೋತ್ಪಾದಕರ ಬಳಿ 10 ಕೆಜಿಯಷ್ಟು ಐಇಡಿ (ಸುಧಾರಿತ ಸ್ಫೋಟಕ ಸಾಧನ) ಸಿಕ್ಕಿದೆ ಎಂದು ಸೇನೆ ತಿಳಿಸಿದೆ.