ಭುವನೇಶ್ವರ (ಒಡಿಶಾ):ಸಿಮ್ ಕಾರ್ಡ್‌ಗಳನ್ನು ವಂಚನೆ ಮೂಲಕ ಖರೀದಿಸಿ ಕೆಲವು ಅಪರಾಧಿಗಳೊಂದಿಗೆ ಒನ್-ಟೈಮ್ ಪಾಸ್‌ವರ್ಡ್‌ಗಳನ್ನು (ಒಟಿಪಿ) ಹಂಚಿಕೊಂಡ ಆರೋಪದಡಿ ನಯಾಗರ್ ಮತ್ತು ಜಾಜ್‌ಪುರ ಜಿಲ್ಲೆಯ ಮೂವರನ್ನು ಒಡಿಶಾ ಪೊಲೀಸರ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಭಾನುವಾರ ಸೆರೆ ಹಿಡಿದಿದೆ. ಬಂಧಿತರನ್ನು ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ (ಐಟಿಐ) ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ಪಠಾಣಿಸಮಂತ್ ಲೆಂಕಾ (35), ಸರೋಜ್ ಕುಮಾರ್ ನಾಯಕ್ (26) ಮತ್ತು ಸೌಮ್ಯಾ ಪಟ್ಟನಾಯಕ್ (19) ಎಂದು ಗುರುತಿಸಲಾಗಿದೆ ಎಂದು ಎಸ್‌ಟಿಎಫ್ ಮೂಲಗಳು ತಿಳಿಸಿವೆ.
ಎಸ್‌ಟಿಎಫ್ ನೀಡಿದ ಹೇಳಿಕೆಯು, ಈ ಮೂವರು ಇತರರ ಹೆಸರಿನಲ್ಲಿ ಹೆಚ್ಚಿನ ಸಂಖ್ಯೆಯ ಸಿಮ್‌ಗಳನ್ನು ವಂಚನೆಯಿಂದ ಖರೀದಿಸುತ್ತಿದ್ದರು. ಒಟಿಪಿಗಳನ್ನು ಕೆಲವು ಪಾಕಿಸ್ತಾನಿ ಗುಪ್ತಚರ ಕಾರ್ಯಕರ್ತರು (ಪಿಐಒ) ಅಥವಾ ಐಎಸ್‌ಐ ಏಜೆಂಟ್‌ಗಳು ಸೇರಿದಂತೆ ಪಾಕಿಸ್ತಾನ ಹಾಗೂ ಭಾರತದಲ್ಲಿ ವಿವಿಧ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು. ಇದಕ್ಕೆ ಪ್ರತಿಯಾಗಿ ಅವರಿಗೆ ಭಾರತದಲ್ಲಿನ ಕೆಲವು ಪಾಕಿಸ್ತಾನಿ ಏಜೆಂಟ್‌ಗಳು ಹಣ ಪಾವತಿಸುತ್ತಿದ್ದರು." ಎಂದು ತಿಳಿಸಿದೆ.
"ಈ ವ್ಯಕ್ತಿಗಳು ಹಂಚಿಕೊಂಡ ಒಟಿಪಿಗಳನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ(Whatsapp, Telegram, Facebook) ಮತ್ತು ಆನ್‌ಲೈನ್ ಶಾಪಿಂಗ್ ಸೈಟ್‌ಗಳಲ್ಲಿ (Amazon ಮತ್ತು Flipkart) ವಿವಿಧ ಖಾತೆಗಳು / ಚಾನಲ್‌ಗಳನ್ನು ರಚಿಸಲು ಬಳಸಲಾಗಿದೆ. ಇಮೇಲ್ ಖಾತೆಗಳನ್ನು ತೆರೆಯಲು ಸಹ ಇವುಗಳನ್ನು ಬಳಸಲಾಗಿದೆ. ಅಂತಹ ಉದ್ದೇಶಗಳಿಗಾಗಿ ಭಾರತದ ಮೊಬೈಲ್ ಸಂಖ್ಯೆಗಳನ್ನು ಬಳಸುವುದರಿಂದ ಈ ಖಾತೆಗಳು ಭಾರತೀಯರ ಒಡೆತನದಲ್ಲಿದೆ ಎಂದು ಜನರು ಭಾವಿಸುತ್ತಾರೆ. ವಾಸ್ತವವಾಗಿ ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿದ್ದವು" ಎಂದು ಎಸ್‌ಟಿಎಫ್ ಐಜಿ ಜೆ.ಎನ್ ಪಂಕಜ್ ಹೇಳಿದರು.