ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಎಲ್ಒಸಿಯ( ಭಾರತ ಪಾಕ್ ಗಡಿ ನಿಯಂತ್ರಣ ರೇಖೆ) ಉದ್ದಕ್ಕೂ ಇರುವ ಲಾಂಚಿಂಗ್ ಪ್ಯಾಡ್ಗಳಲ್ಲಿ 250ರಿಂದ 300 ಭಯೋತ್ಪಾದಕರು ಒಳನುಸುಳಲು ಕಾಯುತ್ತಿದ್ದು, ಈ ಸವಾಲನ್ನು ಎದುರಿಸಲು ನಮ್ಮ ಸೈನಿಕರು ಸಜ್ಜಾಗಿದ್ದಾರೆ ಎಂದು ಬಿಎಸ್‌ಎಫ್ ಹೆಚ್ಚುವರಿ ಮಹಾನಿರ್ದೇಶಕ ಸುರಿಂದರ್ ಪವಾರ್ ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ಹುತಾತ್ಮರಾದ ಬಿಎಸ್‌ಎಫ್ ಯೋಧ ಸುದೀಪ್ ಸರ್ಕಾರ್ ಅವರ ಸಂತಾಪ ಸೂಚಕ ಸಭೆಯ ನಂತರ ಶ್ರೀನಗರದ ಬಿಎಸ್‌ಎಫ್ ಪ್ರಧಾನ ಕಚೇರಿಯಲ್ಲಿ ಮಾತನಾಡಿದ ಸುರಿಂದರ್ ಪವಾರ್ ಎಲ್ಒಸಿಯಲ್ಲಿ ಉಗ್ರಗಾಮಿ ಚಟುವಟಿಕೆಗಳು ನಿಂತಿಲ್ಲ, ನವೆಂಬರ್ನಲ್ಲಿ ಹಿಮಪಾತವಾಗುವುದಕ್ಕೆ ಮೊದಲು ಭಯೋತ್ಪಾದಕರು ಒಳನುಸುಳಬಹುದು. ಭಯೋತ್ಪಾದಕರ ಎಲ್ಲ ಪ್ರಯತ್ನಗಳನ್ನು ವಿಫಲಗೊಳಿಸಲು ಸೈನ್ಯ ಜಾಗರೂಕವಾಗಿರುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.