ಬುಲ್ಧಾನ, ಮಹಾರಾಷ್ಟ್ರ: ಬುಲ್ಧಾನದಲ್ಲಿ ಪ್ರಯಾಣಿಕರ ಬಸ್‌ನ ಭೀಕರ ಅಪಘಾತ (Horrible Road Accident) ಸಂಭವಿಸಿದೆ. ಅಪಘಾತದಲ್ಲಿ 25 ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಸ್ಸಿನಲ್ಲಿ ಒಟ್ಟು 33 ಮಂದಿ ಪ್ರಯಾಣಿಕರಿದ್ದರು. ಈ ಪೈಕಿ ಎಂಟು ಪ್ರಯಾಣಿಕರು ಸುರಕ್ಷಿತವಾಗಿ ಹೊರಬಂದಿದ್ದಾರೆ. ಬುಲ್ಧಾನ ಜಿಲ್ಲೆಯ ಸಿಂಧಖೇದರಾಜ ಬಳಿಯ ಪಿಂಪಲಖುಟಾ ಗ್ರಾಮದ ಬಳಿ ಸಮೃದ್ಧಿ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಈ ಪ್ರಯಾಣಿಕರ ಬಸ್ ನಾಗ್ಪುರದಿಂದ ಪುಣೆಗೆ ಹೋಗುತ್ತಿತ್ತು. ಶನಿವಾರ ನಸುಕಿನ ಜಾವ 2 ಗಂಟೆಗೆ ಈ ಭೀಕರ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಡಿವೈಡರ್ಗೆ ಡಿಕ್ಕಿ, ಹೊತ್ತಿ ಉರಿದ ಬಸ್:ನಾಗ್ಪುರದಿಂದ ಪುಣೆಗೆ ತೆರಳುತ್ತಿದ್ದ ಬಸ್ ಭೀಕರ ಅಪಘಾತಕ್ಕೀಡಾಗಿದೆ. ಬಸ್‌ನಲ್ಲಿ ನಾಗ್ಪುರ, ವಾರ್ಧಾ ಮತ್ತು ಯವತ್ಮಾಲ್‌ನಿಂದ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಈ ಬಸ್ ವಿದರ್ಭ ಟ್ರಾವೆಲ್ಸ್ಗೆ ಸೇರಿದ್ದಾಗಿದೆ. ಸಿಂಧಖೇಡರಾಜ ಸಮೀಪದ ಪಿಂಪಲಖುಟಾ ಗ್ರಾಮದ ಬಳಿ ಸಮೃದ್ಧಿ ಹೆದ್ದಾರಿಯಲ್ಲಿ ಬಸ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ನಂತರ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಕಾಣಿಸಿಕೊಂಡ ನಂತರ ಕೇವಲ ಎಂಟು ಪ್ರಯಾಣಿಕರು ಮಾತ್ರ ಸುರಕ್ಷಿತವಾಗಿ ಹೊರಬರಲು ಸಾಧ್ಯವಾಗಿದೆ. 25 ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇನ್ನು ಬಸ್ಗೆ ಬೆಂಕಿ ಬಿದ್ದ ಸುದ್ದಿ ತಿಳಿದ ಪೊಲೀಸರು ಮತ್ತು ಅಗ್ನಿ ಶಾಮಕದಳ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಬಸ್ಸಿನಿಂದ 25 ಮೃತದೇಹಗಳನ್ನು ಹೊರತೆಗೆದು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಬಸ್ಸಿನಲ್ಲಿ ಒಟ್ಟು 33 ಜನರು ಪ್ರಯಾಣಿಸುತ್ತಿದ್ದರು. 8 ಜನರನ್ನು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬುಲ್ಧಾನ ಸಿವಿಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಬುಲ್ಧಾನ ಪೊಲೀಸ್ ಉಪ ಎಸ್ಪಿ ಬಾಬುರಾವ್ ಮಹಾಮುನಿ ತಿಳಿಸಿದ್ದಾರೆ.
ಸುರಕ್ಷಿತವಾಗಿ ಪಾರಾದವರಲ್ಲಿ ಚಾಲಕ ಮತ್ತು ಸಹಾಯಕ ಸೇರಿದ್ದಾರೆ. ಇದೇ ವೇಳೆ ಗಾಯಾಳುಗಳನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿಯ ಪ್ರಕಾರ, ಈ ಪ್ರಯಾಣಿಕರಲ್ಲಿ ಹೆಚ್ಚಿನವರು ನಾಗ್ಪುರ, ವಾರ್ಧಾ ಮತ್ತು ಯವತ್ಮಾಲ್ ನಿವಾಸಿಗಳಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಎಂಟು ಪ್ರಯಾಣಿಕರು ಉಳಿದಿದ್ದು ಹೀಗೆ: ಪೊಲೀಸರು ಹಾಗೂ ಸ್ಥಳದಲ್ಲಿದ್ದವರ ಪ್ರಕಾರ ಬಸ್ ಮೊದಲು ಕಬ್ಬಿಣದ ಕಂಬಕ್ಕೆ ಡಿಕ್ಕಿ ಹೊಡೆದು ನಂತರ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್ ಪಲ್ಟಿಯಾಗಿದೆ. ಬಳಿಕ ಬದುಕುಳಿದ ಪ್ರಯಾಣಿಕರು ಬಸ್ಸಿನ ಬಾಗಿಲು ಒದ್ದು ಮತ್ತು ಗಾಜುಗಳನ್ನು ಒಡೆದು ಹೊರಬಂದಿದ್ದಾರೆ. ಅಪಘಾತದ ನಂತರ ಬಸ್ಸಿನಿಂದ ಹೆಚ್ಚಿನ ಪ್ರಮಾಣದ ಡೀಸೆಲ್ ರಸ್ತೆಯ ಮೇಲೆ ಸೋರಿಕೆಯಾಗಿದೆ. ಈ ವೇಳೆ ಬಸ್‌ನ ಇಂಜಿನ್ನಲ್ಲಿ ಸ್ಪಾರ್ಕ್ ಆಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಬಸ್‌ನಿಂದ 25 ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಬಸ್ಸಿನಿಂದ ಹೊರತೆಗೆದ ಮೃತದೇಹಗಳನ್ನು ಗುರುತಿಸುವುದು ಕಷ್ಟವಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.