ಬಗಾಹಾ (ಬಿಹಾರ):ಮನೆಯೊಂದರಲ್ಲಿ 24 ನಾಗರ ಹಾವುಗಳು ಹಾಗೂ ಸುಮಾರು 60 ಹಾವಿನ ಮೊಟ್ಟೆಗಳು ಪತ್ತೆಯಾದ ಘಟನೆ ಬಿಹಾರದ ಪಶ್ಚಿಮ ಚಂಪಾರಣ ಜಿಲ್ಲೆಯಲ್ಲಿ ನಡೆದಿದೆ. ಮನೆಯ ಮೆಟ್ಟಿಲುಗಳ ಕೆಳಗಡೆ ಇಷ್ಟೊಂದು ಹಾವುಗಳು ಪತ್ತೆಯಾಗಿದ್ದು, ಇವುಗಳನ್ನು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಹಾವು ಹಿಡಿಯುವವರನ್ನು ನೆರವಿನಿಂದ ಎಲ್ಲ ಹಾವುಗಳು ಹಾಗೂ ಮೊಟ್ಟೆಗಳನ್ನು ನದಿಯ ದಡದಲ್ಲಿ ಬಿಡಲಾಗಿದೆ.
ಇಲ್ಲಿನ ಬಗಾಹಾದ ಮಧುಬನಿ ಪಂಚಾಯಿತಿಯ ವಾರ್ಡ್ ನಂ.5ರ ನಿವಾಸಿ ಮದನ್ ಚೌಧರಿ ಎಂಬುವವರ ಮನೆಯ ಮೆಟ್ಟಿಲ ಕೆಳಗೆ ಈ ಹಾವುಗಳು ಬೀಡುಬಿಟ್ಟಿದ್ದವು. ಶುಕ್ರವಾರ ಕೆಲ ಮಕ್ಕಳು ಮೆಟ್ಟಿಲ ಬಳಿ ಆಟವಾಡುತ್ತಿದ್ದರು. ಅದೇ ಸಮಯದಲ್ಲಿ ನಾಗರಹಾವೊಂದು ಮಕ್ಕಳ ಪಕ್ಕದಲ್ಲಿ ಹಾದು ಹೋಗಿದೆ. ಇದರಿಂದ ಮಕ್ಕಳ ಕಿರುಚಾಟ ಮಾಡಿದ್ದು, ಸುತ್ತಮುತ್ತಲಿನ ಜನರು ಜಮಾಯಿಸಿದ್ದಾರೆ.
ಅಷ್ಟರಲ್ಲೇ, ಆ ಹಾವು ಡ್ರೆಸ್ಸಿಂಗ್ ಟೇಬಲ್ ಕೆಳಗೆ ಪ್ರವೇಶಿಸಿದೆ. ಕುಟುಂಬಸ್ಥರು ಹಾಗೂ ಸ್ಥಳೀಯರು ಆ ಡ್ರೆಸ್ಸಿಂಗ್ ಟೇಬಲ್ ತೆಗೆದಾಗ ಮೂರ್ನಾಲ್ಕು ನಾಗರ ಹಾವುಗಳು ಕಾಣಿಸಿಕೊಂಡಿವೆ. ಮನೆಯಲ್ಲಿ ಒಟ್ಟಿಗೆ ಮೂರ್ನಾಲ್ಕು ಹಾವುಗಳು ಪತ್ತೆಯಾದ ವಿಷಯವು ಗ್ರಾಮದಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿದ್ದು, ಜನಸಾಗರವೇ ನೆರೆದಿದೆ. ಆಗ ಕೂಡಲೇ ಹಾವು ಹಾವಾಡಿಗನನ್ನು ಕರೆಸಲಾಗಿದೆ.
ಇದನ್ನೂ ಓದಿ:ಅಡುಗೆ ಮನೆ ಹೊಕ್ಕಿದ್ದ ನಾಗರಹಾವು : ವಿಷಕಾರಿ ಸರ್ಪದಿಂದ ಮನೆಯವರನ್ನು ಕಾಪಾಡಿದ ಬೆಕ್ಕುಗಳು
ಹಾವಾಡಿಗ ಆ ಹಾವುಗಳನ್ನು ರಕ್ಷಿಸಲು ಪ್ರಾರಂಭಿಸಿದಾಗ ಮತ್ತಷ್ಟು ಹಾವುಗಳು ಪತ್ತೆಯಾಗಿವೆ. ಒಂದೇ ಸ್ಥಳದಲ್ಲಿ 14 ಹಾವುಗಳು ಬಿಡಾರ ಹೂಡಿದ್ದವು. ಅಲ್ಲದೇ, 60 ಮೊಟ್ಟೆಗಳು ಅದೇ ಸ್ಥಳದಲ್ಲಿ ಪತ್ತೆಯಾಗಿವೆ. ಶುಕ್ರವಾರ ಸಂಜೆಯಿಂದ ತಡರಾತ್ರಿಯವರೆಗೂ ಈ ಹಾವುಗಳನ್ನು ಹಿಡಿಯುವ ಕಾರ್ಯ ನಡೆದಿದೆ. ಈ ಎಲ್ಲ ಹಾವುಗಳನ್ನು ಪ್ಲಾಸ್ಟಿಕ್ ಬಾಕ್ಸ್ಗಳು, ಪ್ಲಾಸ್ಟಿಕ್ ಚೀಲಗಳು, ಪ್ಲಾಸ್ಟಿಕ್ ಬಕೆಟ್ಗಳಲ್ಲಿ ತುಂಬಲಾಗಿದೆ. ಬಳಿಕ ಗಂಡಕ್ ನದಿಯ ದಡದಲ್ಲಿ ಹಾವುಗಳನ್ನು ಮೊಟ್ಟೆಗಳ ಸಮೇತ ಬಿಡುಗಡೆ ಮಾಡಲಾಗಿದೆ. ಆದರೆ, ಈ ಹಾವುಗಳನ್ನು ಕಂಡು ಮನೆಯವರು ಹಾಗೂ ನೆರೆಹೊರೆಯವರು ಭಯ ಭೀತರಾಗಿದ್ದಾರೆ. ಇದೇ ಭಯದಿಂದ ಕುಟುಂಬಸ್ಥರು ಮನೆಯಲ್ಲಿ ರಾತ್ರಿ ಮಲಗಲೂ ಇಲ್ಲ ಎಂದು ಗ್ರಾಮಸ್ಥ ನೀರಜ್ ಕುಮಾರ್ ತಿಳಿಸಿದ್ದಾರೆ.
ಮತ್ತೊಂದೆಡೆ, ಕೆಲ ದಿನಗಳ ಹಿಂದೆ ರೋಹ್ತಾಸ್ ಜಿಲ್ಲೆಯಲ್ಲೂ ಒಟ್ಟಿಗೆ ಸುಮಾರು 50ರಿಂದ 60 ಹಾವಿನ ಮರಿಗಳು ಪತ್ತೆಯಾದ ಘಟನೆ ವರದಿಯಾಗಿತ್ತು. ಹಳೆಯ ಮನೆಯೊಂದರಲ್ಲಿ ಒಂದೊಂದೇ ಹಾವುಗಳು ಹೊರಬರಲಾರಂಭಿಸಿದ್ದವು. ಇದರಿಂದ ಆತಂಕಗೊಂಡ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಸುಮಾರು 24 ಹಾವುಗಳನ್ನು ಕೊಂದು ಹಾಕಿದ್ದರು.ನಂತರ ಅರಣ್ಯ ಇಲಾಖೆಯ ರಕ್ಷಣಾ ಸಿಬ್ಬಂದಿ ಬಂದು 30 ಹಾವುಗಳನ್ನು ರಕ್ಷಣೆ ಮಾಡಿದ್ದರು.
ಇದನ್ನೂ ಓದಿ:ಹಳೆಯ ಮನೆಯಲ್ಲಿ 50ಕ್ಕೂ ಹೆಚ್ಚು ಹಾವಿನ ಮರಿಗಳು ಪತ್ತೆ: 24 ಸರ್ಪಗಳನ್ನ ಸಾಯಿಸಿದ ಗ್ರಾಮಸ್ಥರು, 30 ಹಾವುಗಳ ರಕ್ಷಣೆ... ವಿಡಿಯೋ