ರಾಂಚಿ (ಜಾರ್ಖಂಡ್): ಜಾರ್ಖಂಡ್ನಲ್ಲಿ ಸರ್ಕಾರಿ ಕರ್ತವ್ಯ ನಿರ್ವಹಿಸುತ್ತಲೇ ಪೊಲೀಸ್ ಅಧಿಕಾರಿಯೊಬ್ಬರು ಬಡ ವಿದ್ಯಾರ್ಥಿಗಳ ಜ್ಞಾನಾರ್ಜನೆ ವೃದ್ಧಿಸುತ್ತಿದ್ದಾರೆ. ಆನ್ಲೈನ್ ಪಾಠ ಮಾಡುತ್ತಲೇ ಯುವಕರ ಕಲಿಕೆಗೆ ಪ್ರೋತ್ಸಾಹದ ನೀರು ಹರಿಸುತ್ತಿದ್ದಾರೆ. ಇವರ ಬಳಿ ಪಾಠ ಕಲಿತ 22 ಜನರು ಜಾರ್ಖಂಡ್ ಲೋಕಸೇವಾ ಆಯೋಗ (ಜೆಪಿಎಸ್ಸಿ)ದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅದರಲ್ಲೂ ಇಬ್ಬರು ಟಾಪ್ ಹತ್ತರಲ್ಲಿ ಉತ್ತೀರ್ಣ ಆಗಿದ್ದಾರೆ.
ಹೌದು, ಡಿಎಸ್ಪಿ ವಿಕಾಸ್ ಚಂದ್ರ ಶ್ರೀವಾಸ್ತವ್ ಎಂಬುವವರೇ ಬಡ ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಿದ್ದಾರೆ. ತಮ್ಮ ಪೊಲೀಸ್ ಕೆಲಸದೊಂದಿಗೆ ಯೂಟ್ಯೂಬ್ನಲ್ಲಿ ಪಾಠ ಮಾಡುತ್ತಿರುವ ಇವರು, ಎರಡೂ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ದಿಯೋಘರ್ನಲ್ಲಿದ್ದಾಗ ಅಲ್ಲಿನ ಅಂಬೇಡ್ಕರ್ ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಬಗ್ಗೆ ಪಾಠ ಮಾಡುತ್ತಿದ್ದರು.
ಈ ನಡುವೆ ಅವರು ರಾಂಚಿಗೆ ವರ್ಗಾವಣೆಯಾದರು. ಆದರೂ, ದಿಯೋಘರ್ನಲ್ಲಿ ತಮ್ಮನ್ನು ನಂಬಿದ ವಿದ್ಯಾರ್ಥಿಗಳನ್ನು ಮರೆಯದ ವಿಕಾಸ್ ಚಂದ್ರ ಶ್ರೀವಾಸ್ತವ್, 'ಡಿಎಸ್ಪಿ ಕಿ ಪಾಠಶಾಲಾ' ಎಂಬ ಹೆಸರಲ್ಲಿ ಯೂಟ್ಯೂಬ್ ಚಾನಲ್ ಆರಂಭಿಸಿದರು. ಅಲ್ಲಿಂದ ಆನ್ಲೈನ್ ಮೂಲಕ ವಿದ್ಯಾರ್ಥಿಗಳಿಗೆ ಪಾಠಗಳನ್ನು ಹೇಳುತ್ತಿದ್ದಾರೆ. ಯುಪಿಎಸ್ಸಿ, ಜೆಪಿಎಸ್ಪಿ, ಬ್ಯಾಂಕ್ ಸೇರಿದಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಬೇಕಾದ ವಿಷಯಗಳನ್ನು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡುತ್ತಾರೆ. ಇದರಿಂದ ಜಾರ್ಖಂಡ್ನ ವಿವಿಧ ಭಾಗದ ವಿದ್ಯಾರ್ಥಿಗಳಿಗೂ ಅನುಕೂಲವಾಗಿದೆ.
ಪ್ರಸ್ತುತ 'ಡಿಎಸ್ಪಿ ಕಿ ಪಾಠಶಾಲಾ' ಯೂಟ್ಯೂಬ್ ಚಾನಲ್ಗೆ ಸುಮಾರು 17 ಸಾವಿರ ಚಂದಾದಾರರು ಇದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಯುವಕರಲ್ಲಿ ಅಭಿನವ್ ಕುಮಾರ್ ಮತ್ತು ಭೋಲಾ ಪಾಂಡೆ ಎಂಬುವರು ಟಾಪ್ ಹತ್ತರಲ್ಲಿ ಪಾಸ್ ಆಗಿದ್ದಾರೆ. ಇದರಿಂದ ಡಿಎಸ್ಪಿ ವಿಕಾಸ್ ಚಂದ್ರ ಸಹ ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಸೋಲೇ ಗೆಲುವಿನ ಮೆಟ್ಟಿಲು: ಯಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದ ಬಸ್ ಡ್ರೈವರ್ ಮಗಳು