ನವದೆಹಲಿ:ಎಲ್ಲಾ ವಯೋಮಾನದವರಿಗೆ ಲಸಿಕೆ ನೀಡಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇದುವರೆಗೆ 17.56 ಕೋಟಿ ಕೋವಿಡ್ -19 ಲಸಿಕೆ ಪ್ರಮಾಣವನ್ನು ಸರ್ಕಾರ ನೀಡಿದೆ ಮತ್ತು ಮುಂದಿನ ಮೂರು ದಿನಗಳಲ್ಲಿ 46 ಲಕ್ಷ ಲಸಿಕೆ ಪ್ರಮಾಣವನ್ನು ಪೂರೈಸಲಾಗುವುದು ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಭಾನುವಾರ ಹೇಳಿದ್ದಾರೆ.
ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕರ್ಜುನ್ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಠಾಕೂರ್ ಟ್ವಿಟರ್ನಲ್ಲಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ ಎಲ್ಲರಿಗೂ ಉಚಿತ ಲಸಿಕೆ ನೀಡುವಂತೆ ಕೋರಿ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಖರ್ಗೆ ಪತ್ರ ಬರೆದಿದ್ದು, ತಮ್ಮ ಪತ್ರದಲ್ಲಿ ಸಂಸತ್ತು ಕೇಂದ್ರ ಬಜೆಟ್‌ನಲ್ಲಿ ಮೀಸಲಿರಿಸಿದ 35,000 ಕೋಟಿ ರೂ. ಬಳಸಿಕೊಳ್ಳುವಂತೆ ಹೇಳಿದ್ದಾರೆ. ಅಲ್ಲದೇ ಕೋವಿಡ್ ನಿಯಂತ್ರಣ ಸಂಬಂಧ ಕೂಡಲೇ ಸರ್ವಪಕ್ಷ ಸಭೆಯನ್ನು ಕರೆಯಬೇಕೆಂದು ಖರ್ಗೆ ಪ್ರಧಾನಿಯನ್ನು ಒತ್ತಾಯಿಸಿದ್ದಾರೆ.
ರಾಜ್ಯಗಳಲ್ಲಿ ಲಸಿಕೆ ಕೊರತೆ ಆರೋಪಗಳನ್ನು ತಳ್ಳಿಹಾಕಿದ ಠಾಕೂರ್, 72 ಲಕ್ಷ ಡೋಸ್ ಪ್ರಮಾಣದ ಲಸಿಕೆ ಇನ್ನೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿದೆ ಎಂದು ಹೇಳಿದ್ದಾರೆ.
ಲಸಿಕೆಗಳ ಮತ್ತಷ್ಟು ಪೂರೈಕೆಯ ಕುರಿತು, "1.5 ಲಕ್ಷ ಡೋಸ್ ಸ್ಪುಟ್ನಿಕ್ ವಿ ಈಗಾಗಲೇ ಭಾರತವನ್ನು ತಲುಪಿದೆ ಮತ್ತು ಆರ್ಡಿಐಎಫ್ ಸ್ಥಳೀಯ ಭಾರತೀಯ ಕಂಪನಿಗಳೊಂದಿಗೆ ಲಸಿಕೆಗಳ ಬೃಹತ್ ಉತ್ಪಾದನೆಗಾಗಿ ಒಪ್ಪಂದ ಮಾಡಿಕೊಂಡಿದೆ" ಎಂದು ಅವರು ಹೇಳಿದರು.
ಕೊರೊನಾ ರೋಗದ ವಿರುದ್ಧ ಹೋರಾಡಲು ಔಷಧ ಮತ್ತು ವೈದ್ಯಕೀಯ ಲಿಕ್ವಿಡ್ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸಲು, ಹಾಸಿಗೆಗಳ ಸಂಖ್ಯೆ ಹೆಚ್ಚಿಸಲು ಮತ್ತು ವಿವಿಧ ರಾಜ್ಯಗಳಿಗೆ ವಿದೇಶಿ ನೆರವು ವಿತರಿಸಲು ಸರ್ಕಾರ ಕೈಗೊಂಡ ವಿವಿಧ ಕ್ರಮಗಳನ್ನು ಸಚಿವರು ಟ್ವೀಟ್‌ಗಳ ಮೂಲಕ ತಿಳಿಸಿದ್ದಾರೆ. ಭಾರತವು ವಿಶ್ವದ ಅತಿ ವೇಗದ ಮತ್ತು ಅತಿದೊಡ್ಡ ವ್ಯಾಕ್ಸಿನೇಷನ್ ಡ್ರೈವ್ ಅನ್ನು ನಡೆಸುತ್ತಿದೆ ಮತ್ತು ಕಳೆದ ಮೂರು ತಿಂಗಳಲ್ಲಿ 15 ಕೋಟಿ ಜನರಿಗೆ ಡೋಸೇಜ್ ನೀಡಲಾಗಿದೆ ಎಂದು ಸಚಿವರು ಒತ್ತಿ ಹೇಳಿದ್ದಾರೆ."ಕೋವಿಡ್ ಲಸಿಕೆಗಳನ್ನು ಭಾರತ ಸರ್ಕಾರವು 45 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಮತ್ತು ಎಲ್ಲ ಮುಂಚೂಣಿ ಕಾರ್ಮಿಕರಿಗೆ ಉಚಿತವಾಗಿ ನೀಡುತ್ತಿದೆ" ಎಂದು ಠಾಕೂರ್ ಹೇಳಿದರು.
ಜಿಎಸ್‌ಟಿ ಯಿಂದ ಲಸಿಕೆಗಳಿಗೆ ವಿನಾಯಿತಿ ನೀಡುವ ಕುರಿತು ಸಚಿವರು, ದೇಶೀಯ ಲಸಿಕೆ ತಯಾರಕರ ಹಿತಾಸಕ್ತಿ ಮತ್ತು ನಾಗರಿಕರ ಹಿತದೃಷ್ಟಿಯಿಂದ ಶೇ. 5 ರಷ್ಟು ಜಿಎಸ್‌ಟಿ ಇದೆ ಎಂದು ಹೇಳಿದರು. ಜಿಎಸ್‌ಟಿಯಿಂದ ಸಂಪೂರ್ಣ ವಿನಾಯಿತಿ ನೀಡಿದರೆ, ಲಸಿಕೆ ತಯಾರಕರು ತಮ್ಮ ಇನ್‌ಪುಟ್ ತೆರಿಗೆಯನ್ನು ಸರಿದೂಗಿಸಲು ಸಾಧ್ಯವಾಗುವುದಿಲ್ಲ ಮತ್ತು ಬೆಲೆಯನ್ನು ಹೆಚ್ಚಿಸುವ ಮೂಲಕ ಅವುಗಳನ್ನು ಮಾರಾಟ ಮಾಡಲು ತೊಡಗುತ್ತಾರೆ ಎಂದು ಠಾಕೂರ್ ಹೇಳಿದರು.
ಇನ್ನು ಪುಣೆ ಮೂಲದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಕೋವಿಶೀಲ್ಡ್ ಅನ್ನು ಕೇಂದ್ರಕ್ಕೆ ಒಂದು ಡೋಸ್ಗೆ 150 ರೂ. ನಂತೆ ಮತ್ತು ರಾಜ್ಯಗಳಿಗೆ 300 ರೂ. ಗಳಂತೆ ಪೂರೈಸುತ್ತಿದೆ. ಆದರೆ, ಖಾಸಗಿ ಆಸ್ಪತ್ರೆಗಳು ಇದರ ಬೆಲೆಯನ್ನು ರಾಜ್ಯದಲ್ಲಿ ದ್ವಿಗುಣಗೊಳಿಸಿ 600 ರೂ. ದರದಲ್ಲಿ ನೀಡುತ್ತಿವೆ. ಆದರೆ, ಕೋವಾಕ್ಸಿನ್ ತಯಾರಕ ಭಾರತ್ ಬಯೋಟೆಕ್ ತನ್ನ ಲಸಿಕೆಯನ್ನು ಕೇಂದ್ರಕ್ಕೆ 150 ರೂ., ರಾಜ್ಯ ಸರ್ಕಾರಗಳಿಗೆ 600 ರೂ. ಮತ್ತು ಖಾಸಗಿ ಆಸ್ಪತ್ರೆಗಳಿಗೆ 1,200 ರೂ. ನಂತೆ ನೀಡುತ್ತಿದೆ.