ರೋಹ್ತಾಸ್ (ಬಿಹಾರ): ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿಂದು ಭಾರಿ ದುರಂತ ಸಂಭವಿಸಿತು. ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ 12 ವರ್ಷದ ಬಾಲಕ ಸೇತುವೆಯ ಪಿಲ್ಲರ್ಗಳ ಮಧ್ಯೆ ಸಿಲುಕಿದ್ದ. ಸುಮಾರು 24 ಗಂಟೆಗಳ ರಕ್ಷಣಾ ಕಾರ್ಯಾಚರಣೆ ನಡೆಸಿ ಆತನನ್ನು ಜೀವಂತವಾಗಿ ರಕ್ಷಣೆ ಮಾಡಲಾಗಿತ್ತು. ಆದರೆ, ಕುಟುಂಬಸ್ಥರ ಪ್ರಾರ್ಥನೆ ಫಲಿಸಲಿಲ್ಲ. ರಕ್ಷಣಾ ಸಿಬ್ಬಂದಿಯ ಶ್ರಮವೂ ವ್ಯರ್ಥವಾಯಿತು. ಏಕೆಂದರೆ, ಆಸ್ಪತ್ರೆಯಲ್ಲಿ ಬಾಲಕ ಪ್ರಾಣ ಬಿಟ್ಟಿದ್ದಾನೆ.
ಮೃತಪಟ್ಟ ಬಾಲಕನನ್ನು ರಂಜನ್ ಕುಮಾರ್ (12) ಎಂದು ಗುರುತಿಸಲಾಗಿದೆ. ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ. ಅಂದಿನಿಂದ ಕುಟುಂಬ ಸದಸ್ಯರಿಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಇದೇ ವೇಳೆ ಇಲ್ಲಿನ ನಸ್ರಿಗಂಜ್-ದೌದ್‌ನಗರ ಸೇತುವೆ ಬಳಿ ಹಸು ಮೇಯಿಸಲು ತೆರಳಿದ್ದ ಕೆಲವರು ಬಾಲಕನ ಕೂಗುವ ಶಬ್ಧ ಕೇಳಿದ್ದಾರೆ. (12 year old boy stuck in pillar) ಆಗ ನೋಡಿದಾಗ ಸೇತುವೆಯ ಎರಡು ಪಿಲ್ಲರ್ ನಡುವೆ ಬಾಲಕ ಸಿಲುಕಿಕೊಂಡಿರುವುದು ಪತ್ತೆಯಾಗಿದೆ. ಇದರಿಂದ ಸ್ಥಳೀಯ ಪೊಲೀಸರಿಗೆ ವಿಷಯ ಮುಟ್ಟಿಸಲಾಗಿದೆ. ನಂತರ ಬಾಲಕನ ಮಾಹಿತಿ ಕಲೆ ಹಾಕಿ ಕುಟುಂಬಸ್ಥರಿಗೂ ತಕ್ಷಣ ತಿಳಿಸಲಾಗಿದೆ.
ಎಸ್‌ಡಿಆರ್‌ಎಫ್ - ಎನ್‌ಡಿಆರ್‌ಎಫ್ ಜಂಟಿ ಕಾರ್ಯಾಚರಣೆ: ಬಾಲಕ ಕಂಬಗಳ ಮಧ್ಯೆ ಸಿಲುಕಿರುವ ಮಾಹಿತಿ ಪಡೆದ ತಕ್ಷಣ ಪೊಲೀಸರು ಹಾಗೂ ಕುಟುಂಬಸ್ಥರು ಸೇರಿ ಎಲ್ಲರೂ ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯ ಆರಂಭಿಸಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್‌ಡಿಆರ್‌ಎಫ್) ಸಹ ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಾಚರಣೆಗೆ ಕೈಜೋಡಿಸಿದೆ. ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಮತ್ತು ಸ್ಥಳೀಯ ಆಡಳಿತದ ಸಿಬ್ಬಂದಿ ಜಂಟಿಯಾಗಿ ಬಾಲಕನ ರಕ್ಷಣೆಗೆ ಶ್ರಮಿಸಿದ್ದಾರೆ. ಆದರೆ, ಪಿಲ್ಲರ್ಗಳ ಸಂದುಗಳಲ್ಲಿ ಬಾಲಕ ಸಿಲುಕಿದ್ದರಿಂದ ಗಂಟೆಗಳ ರಕ್ಷಣಾ ಕಾರ್ಯ ಕೈಗೊಂಡರೂ ಹೊರತೆಗೆಯಲು ಹರಸಾಹಸ ಪಡುವಂತಾಯಿತು.