ಬಾರ್ಮರ್ (ರಾಜಸ್ಥಾನ): ಭಾರತ ಮತ್ತು ಪಾಕಿಸ್ತಾನ ಗಡಿಗೆ ಹೊಂದಿಕೊಂಡಿರುವ ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ 55 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಸಿಬ್ಬಂದಿ ಸ್ಥಳೀಯ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ಕೈಗೊಂಡು ಈ ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ.
ಬಾರ್ಮರ್ ಜಿಲ್ಲೆಯ ಭಾರತ ಮತ್ತು ಪಾಕ್ ಗಡಿಯ ಸಮೀಪವಿರುವ ಕೆಲ್ನೋರ್ ಗ್ರಾಮದಲ್ಲಿ ಬಿಎಸ್‌ಎಫ್, ಎನ್‌ಸಿಬಿ ಹಾಗೂ ಪೊಲೀಸ್ ಸಿಬ್ಬಂದಿ ಜಂಟಿಯಾಗಿ ಶನಿವಾರ ಕಾರ್ಯಾಚರಣೆ ನಡೆಸಿವೆ. ಈ ವೇಳೆ ಬೇಲಿ ಬಳಿಯ ಭೂಮಿಯಲ್ಲಿ ಅಡಗಿಸಿಟ್ಟಿದ್ದ ಎರಡು ಚೀಲಗಳಲ್ಲಿ ಪತ್ತೆ ಹಚ್ಚಲಾಗಿದೆ. ಈ ಚೀಲಗಳಲ್ಲಿ ಪ್ಯಾಕ್ ಮಾಡಲಾದ 11 ಹೆರಾಯಿನ್ ಪ್ಯಾಕೆಟ್ ದೊರೆತಿದ್ದು, ಅವುಗಳನ್ನು ಬಿಎಸ್‌ಎಫ್, ಎನ್‌ಸಿಬಿಯ ಜೋಧ್‌ಪುರ ವಿಶೇಷ ಬ್ಯೂರೋ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರ ತಂಡ ವಶಕ್ಕೆ ಪಡೆಯಲಾಗಿದೆ ಎಂದು ಗುಜರಾತ್ ಬಿಎಸ್‌ಎಫ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಲ್ಲದೇ, ವಶಕ್ಕೆ ಪಡೆದ ಪ್ಯಾಕೆಟ್‌ಗಳಲ್ಲಿ 11 ಕೆಜಿಯಷ್ಟು ಹೆರಾಯಿನ್ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಬೆಲೆ ಸುಮಾರು 55 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಕೆಲ್ನೋರ್ ಗ್ರಾಮವು ಗಡಿ ಪ್ರದೇಶದ ಬಿಜ್ರಾಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಈ ಕಾರ್ಯಾಚರಣೆ ಕುರಿತಂತೆ ಗುಜರಾತ್ ಬಿಎಸ್‌ಎಫ್ ಟ್ವೀಟ್ ಸಹ ಮಾಡಿದೆ.